Connect with us

Davanagere

ದಲಿತ ಪೂಜಾರಿಯೇ ಇಲ್ಲಿ ದೇವರು, ಪಾದ ಸ್ಪರ್ಶಕ್ಕಾಗಿ ನೆಲದ ಮೇಲೆ ಹಾಸಿಗೆಯಾದ ಭಕ್ತರು

Published

on

ದಾವಣಗೆರೆ: ದಲಿತರು ಅಂದರೇ ಅಸ್ಪೃಶ್ಯರು, ತುಳಿತಕ್ಕೊಳಗಾದವರು ಅನ್ನುವ ಮಾತಿದೆ. ಆದರೆ ಹರಪ್ಪನಹಳ್ಳಿ ತಾಲೂಕಿನ ಅರಸೀಕೆರೆಯಲ್ಲಿ ದಲಿತರೇ ಇಲ್ಲಿನ ಭಕ್ತರಿಗೆ ದೇವರು. ಅವರ ಪಾದ ಸ್ಪರ್ಶಕ್ಕಾಗಿ ಸಾವಿರಾರು ಭಕ್ತರು ನೆಲದ ಮೇಲೆ ಹಾಸಿಗೆಯಾಗುತ್ತಾರೆ. ಪಾದವನ್ನು ನೆಲಕ್ಕೆ ಮುಟ್ಟಿಸದೇ ಬೆನ್ನ ಮೇಲೆ ನಡೆದರೆ ಭಕ್ತರ ಇಷ್ಟಾರ್ಥ ಸಿದ್ದಿಯಾಗುತ್ತದೆ ಎನ್ನುವುದು ಇಲ್ಲಿನ ಭಕ್ತರ ನಂಬಿಕೆಯಾಗಿದೆ.

ಗ್ರಾಮದ ಶಕ್ತಿ ದೇವತೆ ದಂಡಿ ದುಗ್ಗಮ್ಮ ದೇವಿಯ ಕಾರ್ತಿಕೋತ್ಸವದ ಅಂಗವಾಗಿ ಪ್ರತಿ ವರ್ಷ ನಡೆಯುವ ಜಾತ್ರಾ ಮಹೋತ್ಸವದಲ್ಲಿ ದಲಿತ ಪೂಜಾರಿಗಳು ಭಕ್ತರ ಬೆನ್ನಮೇಲೆ ನಡೆಯೋ ಪದ್ಧತಿ ಜಾರಿಯಲ್ಲಿದೆ. ಇಲ್ಲಿ ದಲಿತ ಪೂಜಾರಿಗಳಿಗೆ ದೇವರ ಸ್ಥಾನ ನೀಡಲಾಗಿದ್ದು, ದೇವರ ಪಾದ ನೆಲಕ್ಕೆ ಸ್ಪರ್ಶ ಆಗಬಾರದು ಎಂದು ಜಾತ್ರೆಗೆ ಬಂದ ಸಾವಿರಾರು ಭಕ್ತರು ತಮ್ಮ ಬೆನ್ನನ್ನೇ ಹಾಸಿಗೆ ಮಾಡಿಕೊಳ್ಳುತ್ತಾರೆ. ಪೂಜಾರಿ ತಮ್ಮ ಬೆನ್ನಮೇಲೆ ನಡೆದರೆ ಒಳಿತಾಗುತ್ತೇ ಅನ್ನೋದು ಭಕ್ತರ ನಂಬಿಕೆ. ಹಾಗಾಗಿ ಶಾಸಕರು ಹಾಗೂ ಸಂಸದರು ಪ್ರಥಮ ಪೂಜೆ ಸಲ್ಲಿಸಿ ದಲಿತ ಪೂಜಾರಿಯ ಆಶೀರ್ವಾದ ಪಡೆಯುತ್ತಾರೆ. ನಂತರ ದಲಿತ ಪೂಜಾರಿಗಳು ಸುಮಾರು ಎರಡು ಕಿಲೋಮೀಟರ್ ದೂರ ಭಕ್ತರ ಬೆನ್ನಮೇಲೆ ನಡೆದುಕೊಂಡು ದೇವಸ್ಥಾನಕ್ಕೆ ಹೋಗ್ತಾರೆ.

ಆಧುನಿಕ ಕಾಲದಲ್ಲಿ ದೇವರು ಎನ್ನುವ ನಂಬಿಕೆ ಮಾಯವಾಗುತ್ತಿರುವಾಗ ಇಂತಹ ಆಚರಣೆ ಯುವ ಪೀಳಿಗೆಗೆ ಅದರ್ಶವಾಗಲಿದೆ. ಸರ್ವ ಧರ್ಮಗಳನ್ನು ಒಂದೇ ರೀತಿಯಾಗಿ ನೋಡುವಂತಹ ವಾತವರಣ ಇಲ್ಲಿ ಸೃಷ್ಠಿಯಾಗಿದೆ. ದಲಿತ ವ್ಯಕ್ತಿಯೊಬ್ಬ ದೇವತೆಗೆ ಪೂಜಿಸಲ್ಲಿಸಿ ಅ ದೇವರನ್ನು ತಲೆ ಮೇಲೆ ಹೊತ್ತುಕೊಂಡು ಜನರ ಮೇಲೆ ನಡೆದಾಡಿದರೆ ಒಳಿತಾಗುತ್ತದೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ನಾವೆಲ್ಲರೂ ಒಂದೇ ತಾಯಿ ಮಕ್ಕಳು, ನಮ್ಮಲ್ಲಿ ಯಾವುದೇ ಬೇಧಭಾವ ಇಲ್ಲ ಅನ್ನೋದಕ್ಕೆ ಈ ಆಚರಣೆಯೇ ಸಾಕ್ಷಿಯಾಗಿದೆ.

ಇಡೀ ರಾಜ್ಯದಲ್ಲಿ ದಂಡಿ ದುಗ್ಗಮ್ಮ ದೇವಿಗೆ ಮಾತ್ರ ದಲಿತ ಪೂಜಾರಿ ಇರೋದು ಇಲ್ಲಿನ ವಿಶೇಷ. ದಲಿತ ಪೂಜಾರಿ ಪಾದ ನಮಗೆ ಸ್ಪರ್ಶವಾದರೆ ನಾವೇ ಭಾಗ್ಯವಂತರು ಅನ್ನೋ ನಂಬಿಕೆ ಇಲ್ಲಿನ ಭಕ್ತರದ್ದಾಗಿದೆ. ಏನೇ ಆಗಲಿ ಆಧುನಿಕ ಯುಗದಲ್ಲಿಯೂ ಇಂತಹ ಆಚರಣೆಗಳೂ ಇನ್ನೂ ಜೀವಂತವಾಗಿದ್ದು ನಮ್ಮ ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡುತ್ತಿರೋದಂತೂ ಸತ್ಯ.

Click to comment

Leave a Reply

Your email address will not be published. Required fields are marked *