ದಾವಣಗೆರೆ: ಮೂರು ಜನ ಮಕ್ಕಳು ಸರ್ಕಾರಿ ಕೆಲಸದಲ್ಲಿ ಇದ್ದರೂ ಹೆತ್ತ ತಾಯಿಯನ್ನು ಪಾಳು ಬಿದ್ದ ಮನೆಯಲ್ಲಿ ಬಿಟ್ಟು ಹೋದ ಮನಕಲುಕುವ ಘಟನೆ ದಾವಣಗೆರೆ ಜಿಲ್ಲೆಯ ಗುಡಾಳ್ ಗ್ರಾಮದಲ್ಲಿ ನಡೆದಿದೆ.
ಗುಡಾಳ್ ಗ್ರಾಮದ ನಿವಾಸಿ ಹಿರಿಯಮ್ಮ ಅನಾಥೆಯಂತೆ ಜೀವನ ನಡೆಸುತ್ತಿರುವ ವೃದ್ಧೆ. ಹಿರಿಯಮ್ಮ ಅವರ ಹಿರಿಯ ಮಗ ವೇದಮೂರ್ತಿ ಹರಿಹರ ತಾಲೂಕಿನಲ್ಲಿ ಮುಖ್ಯ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಮಗಳು ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
Advertisement
ಹಿರಿಯಮ್ಮ ಅವರ ಪತಿ ತಿಪ್ಪೇಸ್ವಾಮಿ ಶಿಕ್ಷಕರಾಗಿ ನಿವೃತ್ತಿ ಹೊಂದಿದ್ದು, ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಪತಿಯ ಸಾವಿನ ನಂತರ ಹಿರಿಯಮ್ಮ ಅವರಿಗೆ ಸಿಗುತ್ತಿದ್ದ ಪಿಂಚಣಿ ಹಣ ಹಾಗೂ ಆಸ್ತಿಯನ್ನು ಮಕ್ಕಳು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಬಳಿಕ ಅವರನ್ನು ಯಾರೊಬ್ಬರು ನೋಡಿಕೊಳ್ಳದೆ ಪಾಳು ಬಿದ್ದ ಮನೆಯಲ್ಲಿ ಬಿಟ್ಟು ಹೋಗಿದ್ದಾರೆ.
Advertisement
Advertisement
ವೃದ್ಧೆ ಹಿರಿಯಮ್ಮ ಅವರು ಇರುವ ಮನೆಯ ಮೇಲ್ಛಾವಣಿ ಹಂಚುಗಳು ಮುರಿದಿವೆ. ಮನೆಯ ಒಂದು ಭಾಗದ ಗೋಡೆ ಕುಸಿದಿದ್ದು, ಮಳೆಯಾದರೆ ಮನೆಯ ತುಂಬಾ ನೀರು ನಿಲ್ಲುತ್ತದೆ. ಮಹಾಮಳೆಗೆ ಮನೆ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಆದರೂ ಮಕ್ಕಳು ಮಾತ್ರ ತಾಯಿಯ ಬಗ್ಗೆ ಕಿಂಚಿತ್ತೂ ಕಾಳಜಿ ತೋರುತ್ತಿಲ್ಲವಂತೆ. ಮುಪ್ಪಿನಲ್ಲಿ ನೋಡಿಕೊಳ್ಳಬೇಕಾದ ಮಕ್ಕಳೇ ತಾಯಿಯನ್ನು ಪಾಳುಬಿದ್ದ ಮನೆಯಲ್ಲಿ ಬಿಟ್ಟು ಹೋಗಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಹಿರಿಯಮ್ಮ ಅವರ ಪರಿಸ್ಥಿತಿಯನ್ನು ನೋಡಲಾಗದೇ ಗ್ರಾಮದ ಕೆಲವರು ಊಟ-ಉಪಚಾರ ಮಾಡುತ್ತಿದ್ದಾರೆ. ಮಕ್ಕಳು ಹೆತ್ತ ತಾಯಿಯನ್ನು ನೋಡಲಿಕ್ಕೂ ಕೂಡ ಬರುತ್ತಿಲ್ಲವೆಂದು ಸ್ಥಳೀಯರು ದೂರಿದ್ದಾರೆ.
ನನಗೆ ವಿಷ ಕೊಟ್ಟುಬಿಡಿ ಸಾಯುತ್ತೇನೆ. ಮಕ್ಕಳ ಮನೆಗೆ ಹೋದರೆ ನಾಯಿ ತರ ನನ್ನ ನೋಡುತ್ತಾರೆ. ಹೆತ್ತು ಹೊತ್ತು ಮಕ್ಕಳನ್ನು ಸಾಕಿದರೆ ನನಗೆ ಈ ಪರಿಸ್ಥಿತಿ ಬಂದಿದೆ ಎಂದು ಹಿರಿಯಮ್ಮ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv