– ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾದ ಜನಪ್ರತಿನಿಧಿ
ದಾವಣಗೆರೆ: ಒಂದು ಕಡೆ ಮಳೆಯಿಂದ ಜಿಲ್ಲೆಯ ಜನ ತತ್ತರಿಸುತ್ತಿದ್ದರೆ ಇನ್ನೊಂದೆಡೆ ಶಾಸಕರು ಫೋಟೋ ಪೋಸ್ ಕೊಡುತ್ತಾ ಕಾಲಹರಣ ನಡೆಸಿರುವ ಪ್ರಸಂಗ ಬೆಳಕಿಗೆ ಬಂದಿದೆ.
ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್.ಎ ರವೀಂದ್ರನಾಥ್ ಅವರ ಮೇಲೆ ಈ ಆರೋಪ ಕೇಳಿಬಂದಿದೆ. ದಾವಣಗೆರೆಯ ಪಿಬಿ ರಸ್ತೆಯಲ್ಲಿರುವ ರಿಲಯನ್ಸ್ ಮಾರ್ಕೆಟ್ ಬಳಿ ಶಾಸಕರು ಕಸ ತುಂಬುವಂತೆ ಪೋಸ್ ಕೊಟ್ಟು ಫೋಟೋ ತೆಗೆಸಿಕೊಂಡಿದ್ದಾರೆ.
Advertisement
Advertisement
ದಾವಣಗೆರೆಯ ಉತ್ತರ ಕ್ಷೇತ್ರದ ನೂರಾರು ಮನೆಗಳಿಗೆ ನೀರು ನುಗ್ಗಿ ಜನ ತತ್ತರಿಸಿ ಹೋಗಿದ್ದಾರೆ. ಮನೆಗಳಿಗೆ ನೀರು ನುಗ್ಗಿ ಸಮಸ್ಯೆ ಅನುಭವಿಸುತ್ತಿದ್ದರೂ ಜನ ಪ್ರತಿನಿಧಿಗಳು ಮಾತ್ರ ತಮ್ಮ ಶೋಕಿ ಜೀವನ ನಡೆಸುತ್ತಿದ್ದಾರೆ. ಜನರ ಸಮಸ್ಯೆ ಕಾಣಿಸುತ್ತಿಲ್ಲವಾ ಎಂದು ಶಾಸಕರಿಗೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
Advertisement
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮತನಾಡಿದ ಶಾಸಕರು, ಇದು ಕೂಡ ಕೆಲಸವಲ್ವ. ನರೇಂದ್ರ ಮೋದಿಯವರ ಸ್ವಚ್ಛ ಭಾರತದ ಕೆಲಸದಲ್ಲಿ ಭಾಗಿಯಾಗಿದ್ದೇನೆ. ನೆರೆಹಾನಿಗೀಡಾದ ಕೆಲ ಪ್ರದೇಶಗಳಿಗೂ ಭೇಟಿ ಮಾಡಿದ್ದೇನೆ. ನನ್ನ ಕ್ಷೇತ್ರದಲ್ಲಿ ಭಾರೀ ಅನಾಹುತಗಳು ನಡೆದಿಲ್ಲ. ಸಣ್ಣ-ಪುಟ್ಟ ಹಾನಿಗಳು ನಡೆದಿವೆ ಎಂದಿದ್ದಾರೆ.
Advertisement
ಒಂದೇ ದಿನ ಹೆಚ್ಚು ಮಳೆ ಬಂದೆ ಏನು ಮಾಡುವುದು. ರಾಜಕಾಲುವೆ ರಿಪೇರಿ, ಚರಂಡಿಗಳನ್ನು ಕ್ಲೀನ್ ಮಾಡುತ್ತಿದ್ದೇವೆ. ಕಸ ತೆಗೆಯುವ ಕೆಲಸವನ್ನೂ ಮಾಡಬೇಕಲ್ವ. ಈ ಕಾರ್ಯಕ್ರಮ ಮೊದಲೇ ಫಿಕ್ಸ್ ಆಗಿತ್ತು ಎಂದು ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಕೆಲ ತಿಂಗಳ ಹಿಂದೆಯಷ್ಟೇ ಭಾರೀ ಮಳೆಯಿಂದಾಗಿ ತತ್ತರಿಸಿ ಹೋಗಿ ಚೇತರಿಸಿಕೊಳ್ಳುತ್ತಿದ್ದ ಉತ್ತರ ಕರ್ನಾಟಕ ಮಂದಿಗೆ ಇದೀಗ ಮತ್ತೆ ಪ್ರವಾಹ ಭೀತಿ ಉಂಟಾಗಿದೆ. ಇದೀಗ ಆ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಜನ ಜಾನವಾರು, ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗುತ್ತಿವೆ. ಈ ಮಧ್ಯೆ ಸಂತ್ರಸ್ತರಿಗೆ ನೆರವಾಗಬೇಕಾದ ಶಾಸಕರೇ ಈ ರೀತಿ ಶೋಕಿ ಮಾಡುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.