ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿರುವ ಪೋಷಕ ನಟ ಜಯಕುಮಾರ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ದಾವಣಗೆರೆ ಜಿಲ್ಲೆ ಕೊಡಗಾನೂರ ಗ್ರಾಮದ ಜಯಕುಮಾರ್ ಹಿರಿ ತೆರೆ, ಕಿರು ತೆರೆ, ಹಾಗೂ ವೃತ್ತಿ ರಂಗ ಭೂಮಿಯ ಹಿರಿಯ ಕಲಾವಿದರು. ಅನಾರೋಗ್ಯದಿಂದ ಬಳಲುತ್ತಿರುವ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ ಚಿಕಿತ್ಸೆಗೆ ಹಣ ಸಾಲದ ಹಿನ್ನೆಯಲ್ಲಿ ನೆರವಿಗೆ ಪತ್ನಿ ಪದ್ಮಾವತಿ ಹಾಗೂ ಪುತ್ರ ಮಾರುತಿ ಮನವಿ ಮಾಡಿಕೊಂಡಿದ್ದಾರೆ.
ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಜಯಕುಮಾರ್ ಅವರ ಪುತ್ರ ಮಾರುತಿ, ಒಂದು ತಿಂಗಳ ಹಿಂದೆ ನಮ್ಮ ತಂದೆ ಕಲಬುರಗಿಗೆ ಹೋಗಿ ಅಲ್ಲಿದ್ದ ನಾಟಕ ಕಂಪನಿಯಲ್ಲಿ ಅಭಿನಯಿಸುತ್ತಿದ್ದರು. ಆಗ ಲಘು ಹೃದಯಾಘಾತವಾಗಿತ್ತು. ಚಿಕಿತ್ಸೆ ಬಳಿಕ ಸ್ವಲ್ಪ ಚೇತರಿಸಿಕೊಂಡಿದ್ದರು. ಆದರೆ ಇತ್ತೀಚೆಗೆ ಎರಡನೇ ಬಾರಿ ಹೃದಯಾಘಾತವಾಯಿತು. ತಕ್ಷಣವೇ ಅವರನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ನೀಡಿದ ಹೃದಯ ನಾಳಗಳಿಗೆ ಎರಡು ಸ್ಟಂಟ್ ಅಳವಡಿಕೆ ಮಾಡಿದ್ದಾರೆ ಎಂದರು.
ಚಿಕಿತ್ಸೆ ಬಳಿಕ ಮನೆಗೆ ಹೋಗಬೇಕು ಎನ್ನುವಷ್ಟರಲ್ಲಿ ತಂದೆ ಜಯಕುಮಾರ್ ವಾಂತಿ ಮಾಡಿಕೊಳ್ಳಲು ಆರಂಭಿಸಿದರು. ಸಮಸ್ಯೆಯನ್ನು ಅರಿತ ವೈದ್ಯರು, ಕಿಡ್ನಿಗಳು ಕೈಕೊಡುವ ಸಾಧ್ಯತೆ ಇದೆ. ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಸಲಹೆ ನೀಡಿದರು. ದಾವಣಗೆರೆಯ ಆಸ್ಪತ್ರೆ ಖರ್ಚಿಗೆ ಸಾಣಿಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯರು ಅನುಕೂಲವಾದರು ಎಂದು ತಿಳಿಸಿದರು.
ಹೃದಾಯಾಘಾತದ ನಂತರ ಕಿಡ್ನಿಗಳು ಡ್ಯಾಮೇಜ್ ಆಗಿವೆ ಹಾಗೂ ಶ್ವಾಸಕೋಶದಲ್ಲಿ ನೀರು ತುಂಬಿದೆ ಅಂತ ಮಣಿಪಾಲ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ತಂದೆ ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಈಗಾಗಲೇ 1.5 ಲಕ್ಷ ರೂ. ಖರ್ಚಾಗಿದ್ದು, ಸದ್ಯದಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಿದ್ದಾರೆ. ಆಗ ಸುಮಾರು ಒಂದು ಲಕ್ಷ ರೂ. ಪಾವತಿಸಬೇಕಾಗುತ್ತದೆ ಎಂದು ಮಾರುತಿ ಹೇಳಿದರು. ಈ ಮೂಲಕ ಅವರು ಚಿತ್ರರಂಗದಿಂದ ಸಹಾಯ ಕೇಳಿದ್ದಾರೆ.
ಜನುಮದ ಜೋಡಿ, ತಾಯಿಗೊಬ್ಬ ಕರುಣ, ಸತ್ಯನಾರಾಯಣ ಪೂಜಾ ಫಲ, ಸ್ವಸ್ತಿಕ್, ಕಿಟ್ಟಿ ಚಿತ್ರದಲ್ಲಿ ಜಯಕುಮಾರ್ ಅಭಿನಯಿಸಿದ್ದಾರೆ. ವಿಷ್ಣುವರ್ಧನ್, ಅಂಬರೀಶ್, ದೇವರಾಜ್, ಶಿವರಾಜ್ ಕುಮಾರ್, ದರ್ಶನ್ ಸೇರಿದಂತೆ ಅನೇಕ ನಟರ ಜೊತೆಗೆ 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಜನನಿ, ಭಾಗೀರಥಿ ಸೇರಿದಂತೆ ಸಾಕಷ್ಟು ಧಾರವಾಹಿಗಳಲ್ಲೂ ಅಭಿನಯಿಸಿದ್ದಾರೆ.
ಜಯಕುಮಾರ್ ಅವರು ಇಷ್ಟೊಂದು ಹೆಸರು ಮಾಡಿದರೂ, ವಯಸ್ಸಾದರೂ ಇದೂವರೆಗೆ ಯಾವುದೇ ಸರ್ಕಾರದ ಪ್ರಶಸ್ತಿಗೆ ಭಾಜನರಾಗಿಲ್ಲ. ಈ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಅವರು ಆಯ್ಕೆಯಾಗಿದ್ದಾರೆ. ಆದರೆ ಅಕಾಡೆಮಿಗಳು ರದ್ದಾಗಿದ್ದಕ್ಕಾಗಿ ಪ್ರಶಸ್ತಿ ಪ್ರಕಟವಾದರೂ ಅವರಿಗೆ ಇನ್ನೂ ದೊರೆತಿಲ್ಲ. ಒಂದು ವೇಳೆ ಪ್ರಶಸ್ತಿ ದೊರೆತಿದ್ದರೆ ಮಣಿಪಾಲ ಆಸ್ಪತ್ರೆಯ ಖರ್ಚು ಸರ್ಕಾರವೇ ಭರಿಸಬಹುದಾಗಿತ್ತು ಎಂಬ ಮಾತುಗಳು ಕೇಳಿ ಬಂದಿವೆ.