– ಪುತ್ರಿಗೆ ಗೊತ್ತಾಗಿದ್ದೆ ತಪ್ಪಾಯ್ತು
– ಕತ್ತು ಹಿಸುಕಿ ಮಗಳ ಕೊಲೆ
ಶಿವಮೊಗ್ಗ: ಮಗಳಿಗೆ ತನ್ನ ಅನೈತಿಕ ಸಂಬಂಧ ಗೊತ್ತಾಗಿದ್ದಕ್ಕೆ ಪಾಪಿ ತಾಯಿಯೊಬ್ಬಳು ಮಗಳನ್ನೇ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗ ನಗರದ ರತ್ನಾಕರನಗರದಲ್ಲಿ ನಡೆದಿದೆ.
ಅಮೃತಾ (17) ಮೃತ ಹುಡುಗಿ. ಅಮೃತಾಳಿಗೆ ತನ್ನ ಅನೈತಿಕ ಸಂಬಂಧ ತಿಳಿಯಿತು ಎನ್ನುವ ಕಾರಣಕ್ಕೆ ಆರೋಪಿ ಲತಾ ಮಗಳನ್ನೇ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಅಲ್ಲದೇ ಯಾರಿಗೂ ಅನುಮಾನ ಬಾರದಿರಲಿ ಎಂದು ತಾನೇ ಮನೆಯಿಂದ ಆಚೆ ಬಂದು ತನ್ನ ಮಗಳು ಅಸ್ವಸ್ಥಳಾಗಿದ್ದಾಳೆ ಎಂದು ಕೂಗಿಕೊಂಡಿದ್ದಾಳೆ. ಅಲ್ಲದೇ ಪೊಲೀಸರಿಗೂ ಸಹ ಕರೆ ಮಾಡಿ ತನ್ನ ಮಗಳು ಮೃತಪಟ್ಟಿರುವ ಬಗ್ಗೆ ತಿಳಿಸಿದ್ದಳು.
ಏನಿದು ಪ್ರಕರಣ?
ಮೃತ ಅಮೃತಾ ಶಿಕಾರಿಪುರದಲ್ಲಿ ತನ್ನ ಅಜ್ಜಿ ಮನೆಯಲ್ಲಿ ಇದ್ದುಕೊಂಡು ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಪ್ರಥಮ ಪಿಯುಸಿ ಪರೀಕ್ಷೆ ಮುಗಿದ ಕಾರಣ ಶಿವಮೊಗ್ಗದಲ್ಲಿ ವಾಸವಿದ್ದ ತಾಯಿ ಜೊತೆ ಕಾಲ ಕಳೆಯಲು ಬಂದಿದ್ದಳು. ಆರೋಪಿ ಲತಾಳ ಪತಿ 6 ವರ್ಷಗಳ ಹಿಂದೆ ಮೃತಪಟ್ಟಿದ್ದ. ಹೀಗಾಗಿ ಲತಾ ಶಿವಮೊಗ್ಗದಲ್ಲಿ ಖಾಸಗಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡಿಕೊಂಡು ರತ್ನಾಕರನಗರ ಬಡಾವಣೆಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಳು. ಮಗಳನ್ನು ತನ್ನ ತಾಯಿಯ ಮನೆಯಲ್ಲಿ ಬಿಟ್ಟು ಓದಿಸುತ್ತಿದ್ದಳು.
ಒಬ್ಬಂಟಿಯಾಗಿದ್ದ ಆರೋಪಿ ಲತಾ ತನ್ನ ಸಂಬಂಧಿಕರ ಯುವಕನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಈ ವಿಷಯ ತನ್ನ ಮಗಳಿಗೂ ಸಹ ಗೊತ್ತಾಗಿದೆ. ಅಲ್ಲದೇ ಆರೋಪಿ ಲತಾಳ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಯುವಕ ಇತ್ತೀಚೆಗೆ ಲತಾಳ ಮಗಳು ಅಮೃತಾ ಜೊತೆ ಹೆಚ್ಚು ಸಲುಗೆಯಿಂದ ಇರುತ್ತಿದ್ದನಂತೆ. ಇದನ್ನು ಸಹಿಸದ ಲತಾ ತನ್ನ ಮಗಳನ್ನೇ ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಕುರಿತು ಶಿವಮೊಗ್ಗ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಲತಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.