ಮಂಡ್ಯ: ಜೀವನದ ಮೇಲಿನ ಜಿಗುಪ್ಸೆಯಿಂದಾಗಿ ತನ್ನ ಮಗಳನ್ನು ಕೊಲೆ ಮಾಡಿ ನಂತರ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ನಡೆದಿದೆ.
ಶಾಂತಿ (26) ಮತ್ತು ಕೌಶಲ್ಯ (11) ಮೃತ ತಾಯಿ-ಮಗಳು. ಮೇಲುಕೋಟೆಯ ಶಾಂತಿ ಜೀವನದ ಮೇಲಿನ ಜಿಗುಪ್ಸೆಯಿಂದಾಗಿ ತನ್ನ ಮಗಳು ಕೌಶಲ್ಯಳನ್ನು ಮೊದಲು ಕೊಲೆ ಮಾಡಿದ್ದಾಳೆ. ನಂತರ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಳೆದ ಆರು ವರ್ಷದ ಹಿಂದೆ ಶಾಂತಿಯ ಗಂಡ ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟಿದ್ದರು.
ಪತಿ ಸಾವನ್ನಪ್ಪಿದಾಗಿನಿಂದ ಮಗಳನ್ನು ಕೂಲಿ ಮಾಡಿಕೊಂಡು ಶಾಂತಿ ಸಾಕುತ್ತಿದ್ದಳು. ಕಳೆದ ಕೆಲ ತಿಂಗಳಿನಿಂದ ಶಾಂತಿಗೆ ಜಿಗುಪ್ಸೆ ಉಂಟಾಗಿದ್ದು, ಆಗಿನಿಂದ ಶಾಂತಿ ಮಾನಸಿಕ ಸ್ಥೈರ್ಯಯನ್ನು ಕಳೆದುಕೊಂಡಿದ್ದಳು. ಇಂದು ಮನೆಯಲ್ಲಿ ತನ್ನ ಮಗಳನ್ನು ಉಸಿರುಗಟ್ಟಿ ಕೊಲೆ ಮಾಡಿದ್ದಾಳೆ. ನಂತರ ಶಾಂತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.