ಕಲಬುರಗಿ: ವೀರಶೈವ ಸಮಾಜದ ವಿದ್ಯಾರ್ಥಿನಿಯರ ನಿಲಯ ನಿರ್ಮಾಣ ಕಾಮಗಾರಿಗಾಗಿ ಒಂದೇ ಒಂದು ನಿಮಿಷದಲ್ಲಿ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ಅವರು 1 ಕೋಟಿ ರೂಪಾಯಿ ಸಂಗ್ರಹಿಸಿದ್ದಾರೆ.
ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು ವೀರಶೈವ ಸಮಾಜದ ವಿದ್ಯಾರ್ಥಿನಿಯರಿಗೆ ಪಟ್ಟಣಕ್ಕೆ ಬಂದು ವಸತಿ ಮಾಡಲು ಸೂಕ್ತ ಸೂರು ಇರಲಿಲ್ಲ. ಹೀಗಾಗಿ ಕಲಬುರಗಿಯಲ್ಲಿ ನಡೆದ ವೀರಶೈವ-ಲಿಂಗಾಯತ ಶಕ್ತಿ ಕೇಂದ್ರದ ವತಿಯಿಂದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ, ಶರಣ ಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿಯಾದ ಚಿರಂಜೀವಿ ದೊಡಪ್ಪ ಅಪ್ಪ ಸೇರಿದಂತೆ ಹಲವು ಮಠಾಧೀಶರು ಮತ್ತು ನಾಯಕರು ಭಾಗವಹಿಸಿದ್ದರು.
ಈ ವೇಳೆ ಕಲಬುರಗಿ ನಗರದಲ್ಲಿ ವೀರಶೈವ ಸಮಾಜದ ವಿದ್ಯಾರ್ಥಿನಿಯರಿಗಾಗಿ ಒಂದು ವಸತಿ ನಿಲಯ ನಿರ್ಮಿಸಬೇಕು ಎಂದು ಶಹಾಪುರ ಶಾಸಕ ಶರಣಬಸಪ್ಪ ದರ್ಶನಾಪುರ ವಿಷಯವನ್ನು ಪ್ರಸ್ತಾಪಿಸಿ ವೈಯಕ್ತಿಕ 5 ಲಕ್ಷ ರೂಪಾಯಿ ಹಣ ನೀಡುವುದಾಗಿ ಹೇಳಿದರು. ಕೂಡಲೇ ವೇದಿಕೆ ಮೇಲಿದ್ದ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ವೇದಿಕೆ ಮೇಲಿರುವ ಎಲ್ಲರೂ ಕೂಡ ಬಹುತೇಕ ಆರ್ಥಿಕ ಸಬಲರಾಗಿದ್ದೇವೆ. ಹೀಗಾಗಿ ಪ್ರತಿಯೊಬ್ಬರು 5 ಲಕ್ಷ ರೂಪಾಯಿ ದೇಣಿಗೆ ನೀಡಬೇಕೆಂದು ಕರೆ ಕೊಟ್ಟು, ಯಾರು ಹಣ ನೀಡುತ್ತೀರಿ ಕೈ ಎತ್ತಿ ವೀರಶೈವ ಸಮಾಜದ ಅಭಿವೃದ್ಧಿಗೆ ಕಿರು ಕಾಣಿಕೆ ನೀಡಿ ಎಂದು ಮನವಿ ಮಾಡಿದರು.
ಶಾಸಕರು ಹೀಗೆ ಹೇಳುತ್ತಿದ್ದಂತೆ ಮಾಜಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಶಾಸಕ ವೆಂಕಟರೆಡ್ಡಿ ಮುದ್ನಾಳ, ಎಂಎಲ್‍ಸಿ ಚಂದ್ರಶೇಖರ ಪಾಟೀಲ್, ಬಿ.ಜಿ ಪಾಟೀಲ್, ಶಾಸಕ ಎಂ.ವೈ ಪಾಟೀಲ್ ಸೇರಿದಂತೆ ವೇದಿಕೆ ಮೇಲಿದ್ದ 15ಕ್ಕೂ ಹೆಚ್ಚು ಜನ ಕೈ ಎತ್ತಿ ವೈಯಕ್ತಿಕವಾಗಿ 5 ಲಕ್ಷ ರೂಪಾಯಿ ಹಣ ನೀಡುವುದಾಗಿ ಹೇಳಿದರು. ಈ ಮೂಲಕ ಕೇವಲ ಒಂದು ನಿಮಿಷದಲ್ಲಿಯೇ ಕಟ್ಟಡ ಕಾಮಗಾರಿಗೆ ಬೇಕಾದ 1 ಕೋಟಿ ಹಣ ಒಟ್ಟಾಗಿದ್ದು, ಕಾಮಗಾರಿ ಆರಂಭಿಸುತ್ತಿದ್ದಂತೆ ಎಲ್ಲರೂ ಹಣ ನೀಡುವುದಾಗಿ ಘೋಷಿಸಿಕೊಂಡರು.
ಒಂದು ನಿಮಿಷದಲ್ಲಿಯೇ 1 ಕೋಟಿ ಹಣ ಸಂಗ್ರಹಿಸಲು ದತ್ತಾತ್ರೇಯ ಪಾಟೀಲ್ ಹಾಗೂ ಶರಣಬಸಪ್ಪ ದರ್ಶನಾಪುರ ಅವರ ಈ ಮಾಸ್ಟರ್ ಐಡಿಯಾ ವರ್ಕೌಟ್ ಆಗಿದ್ದು, ಆದಷ್ಟು ಬೇಗ ಭೂಮಿ ಪೂಜೆಯ ದಿನಾಂಕ ನಿಗದಿ ಮಾಡಿ ಅದೇ ದಿನ ಎಲ್ಲರೂ ಹಣ ನೀಡುವುದಾಗಿ ಹೇಳಿದರು.