ಮೈಸೂರು ದಸರಾ ಮತ್ತೆ ಬಂದಿದೆ. ಕೇಡಿನ ವಿರುದ್ಧ ಒಳಿತಿನ ಜಯವೆಂಬ ‘ವಿಜಯದಶಮಿ’ ಇದು. ದಸರಾ ಮಹೋತ್ಸವ ಕರುನಾಡಿನ ಸಾಂಸ್ಕೃತಿಕ ಪರಂಪರೆಗೆ ಹಿಡಿದ ಕೈಗನ್ನಡಿ. ಇತಿಹಾಸ, ಸಂಸ್ಕೃತಿ ಮತ್ತು ಸಂಪ್ರದಾಯದ ಸಮ್ಮಿಶ್ರಣದೊಂದಿಗೆ ಕರ್ನಾಟಕದ ಶ್ರೀಮಂತ ಪರಂಪರೆ ನಾಡಹಬ್ಬದಲ್ಲಿ ಅನಾವರಣಗೊಳ್ಳುತ್ತದೆ. ರಾಜವೈಭೋಗ ಮರುಕಳುಸುತ್ತದೆ. ನವರಾತ್ರಿ ನವದುರ್ಗೆಯರ ಪೂಜೆ, ನಾಡ ಅಧಿದೇವತೆ ಚಾಮುಂಡೇಶ್ವರಿಯನ್ನು ಭಕ್ತಿ-ಭಾವದಿಂದ ಸ್ಮರಿಸಲಾಗುತ್ತದೆ. ದಸರಾಗೂ ನಾಡಿನ ಜನತೆಗೂ ಭಾವನಾತ್ಮಕ ನಂಟಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ಜನರು ಬರುತ್ತಾರೆ.
Advertisement
ದಸರಾ ಹಬ್ಬಕ್ಕೂ ಹಿನ್ನೆಲೆ, ಪರಂಪರೆ ಇದೆ. ದಸರಾ ಹಬ್ಬ ಮೊದಲು ಆರಂಭವಾಗಿದ್ದು ವಿಜಯನಗರ ಸಾಮ್ರಾಜ್ಯದಿಂದ. ಅಲ್ಲಿಂದ ಶ್ರೀರಂಗಪಟ್ಟಣ ಹಾಗೂ ಮೈಸೂರಿಗೆ ಬಂದಿತು. ಕೃಷ್ಣದೇವರಾಯ ಶಕ್ತಿ, ಸಾಮರ್ಥ್ಯದ ಆಧಾರದ ಮೇಲೆ ವಿಜಯದಶಮಿ ವಿಶ್ವವಿಖ್ಯಾತಿಯಾಯಿತು. ವಿಜಯದಶಮಿ ದಿನ ಕೃಷ್ಣದೇವರಾಯ ಕುದುರೆ ಮೇಲೆ ಕುಳಿತು ಜನಸ್ತೋಮದ ನಡುವೆ ಸಾಗುತ್ತಿದ್ದರೆ, ಆತನ ಸಾಮ್ರಾಜ್ಯದ ಸುತ್ತಲ ಆಸ್ತಿಕ ರಾಜರು ತಮ್ಮ ಸೈನ್ಯವನ್ನು ಕರೆತಂದು ನಮಸ್ಕರಿಸುತ್ತಿದ್ದರು ಎಂದು ಆಗಿನ ಪರ್ಷಿಯನ್ ರಾಯಭಾರಿ ಅಬ್ದುಲ್ ರಝಾಕ್ ಬರೆದುಕೊಂಡಿದ್ದಾರೆ. 14 ರಿಂದ 17ನೇ ಶತಮಾನದ ಮಧ್ಯಭಾಗದವರೆಗೆ ಸುಮಾರು 300 ವರ್ಷಗಳ ಕಾಲ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯು ಇತ್ತು. ಈ ಸಾಮ್ರಾಜ್ಯದ ಪದ್ಧತಿಗಳು, ಸಾಂಸ್ಕೃತಿಕ ಆಚರಣೆಗಳ ಪರಂಪರೆಯನ್ನು ಮೈಸೂರು ಒಡೆಯರು ಮುಂದುವರಿಸಿದರು.
Advertisement
Advertisement
ಮೈಸೂರು ಒಡೆಯರ್‌ಗೆ ಬಂದಿದ್ದು ಹೇಗೆ?
ಒಡೆಯರ್‌ಗಳು ವಿಜಯನಗರ ಅರಸರ ಸಾಮಂತರಾಗಿದ್ದರು. ವಿಜಯನಗರ ಸಾಮ್ರಾಜ್ಯದ ಪತನ ನಂತರ, ರಾಜ ಒಡೆಯರ್ 1610 ರಲ್ಲಿ ಶ್ರೀರಂಗಪಟ್ಟಣದಲ್ಲಿ ರಾಜಧಾನಿ ಮಾಡಿ ರಾಜತ್ವವನ್ನು ವಹಿಸಿಕೊಂಡರು. ಆ ಸಂದರ್ಭದಲ್ಲಿ ನವರಾತ್ರಿಯನ್ನು ಅದ್ಧೂರಿಯಾಗಿ ಆಚರಿಸಬೇಕು ಎಂದು ಘೋಷಿಸಿದರು. 1799 ರಲ್ಲಿ 4ನೇ ಆಂಗ್ಲೋ-ಮೈಸೂರು ಯುದ್ಧದ ನಂತರ ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ವರ್ಗಾಯಿಸಲಾಯಿತು. ಬಳಿಕ ಮುಮ್ಮಡಿ ಕೃಷ್ಣರಾಜ ಒಡೆಯರ್ ಈ ದಸರಾ ಹಬ್ಬ ಪರಂಪರೆಯನ್ನು ಮುಂದುವರಿಸಿದರು.
Advertisement
1442-1443ರ ನಡುವೆ ವಿಜಯನಗರಕ್ಕೆ ಪರ್ಷಿಯಾದ ಅಬ್ದುಲ್ ರಝಾಕ್ ಮತ್ತು ಪೋರ್ಚುಗೀಸ್‌ನ ಡೊಮಿಂಗೊ ಫಯಾಸ್ (1520-22) ಭೇಟಿ ನೀಡಿದ್ದರು. ವಿಜಯನಗರದಲ್ಲಿ ನವರಾತ್ರಿ ಹಬ್ಬದ ವೈಭವವನ್ನು ತಮ್ಮ ಕೃತಿಗಳಲ್ಲಿ ಸೊಗಸಾಗಿ ವಿವರಿಸಿದ್ದಾರೆ. ರಾಜರು ನವರಾತ್ರಿ ಸಮಯದಲ್ಲಿ ಸಶಸ್ತ್ರ ಪಡೆಗಳ ಮೆರವಣಿಗೆ ವೀಕ್ಷಿಸುತ್ತಿದ್ದರು. ಈ ಆಚರಣೆ ಐತಿಹಾಸಿಕತೆಗೆ ಸಾಕ್ಷಿಯಾಗಿದೆ. ಕಾಲಾನಂತರ ಹಬ್ಬಗಳ ಆಚರಣೆ ಉದ್ದೇಶ ಬದಲಾಗಿದೆ. ಈಗ ನಾಡಹಬ್ಬ ಮೈಸೂರು ದಸರಾ ಪ್ರವಾಸೋದ್ಯಮ ಉತ್ತೇಜಿಸಲು ಒಂದು ಆಧಾರವಾಗಿದೆ.
ಒಡೆಯರ ಸೇವೆ ಸ್ಮರಿಸುವ ಜನ!
ನಾವೀಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ಆದರೂ ಮೈಸೂರು ಸಾಮ್ರಾಜ್ಯದ ಒಡೆಯರ್ ತಮ್ಮ ಪ್ರಜೆಗಳಿಗೆ ನೀಡಿದ ಸೇವೆಯನ್ನು ಜನ ಈಗಲೂ ಸ್ಮರಿಸುತ್ತಾರೆ. ಮೈಸೂರು ಎಂದರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅಂತಾ ಈಗಲೂ ಕೊಂಡಾಡುತ್ತಾರೆ. ಆದ್ದರಿಂದ ದಸರಾ ಸಂದರ್ಭದಲ್ಲಿ ರಾಜಪರಂಪರೆಯನ್ನು ಬಿಂಬಿಸುವ ಖಾಸಗಿ ದರ್ಬಾರ್ ಕೂಡ ನಡೆಯಲಿದೆ. ದಸರಾ ಆಚರಣೆಗಳಲ್ಲಿ ಆಡಳಿತ ವ್ಯವಸ್ಥೆಯ ಪ್ರತಿನಿಧಿಗಳೊಂದಿಗೆ ರಾಜರೂ ಪಾಲ್ಗೊಳ್ಳುತ್ತಾರೆ.
ದಸರಾಗೆ ಧಾರ್ಮಿಕ ನಂಟು
ಮೈಸೂರು ದಸರಾವನ್ನು ತಾತ್ವಿಕ ಮತ್ತು ಧಾರ್ಮಿಕ ತಳಹದಿಯಲ್ಲೂ ನೋಡಬಹುದು. ಚಾಮುಂಡೇಶ್ವರಿ ದೇವಿಯು ರಾಕ್ಷಸ ಮಹಿಷಾಸುರನನ್ನು ಕೊಲ್ಲುವುದು ಕೆಡುಕಿನ ವಿರುದ್ಧ ಒಳಿತಿನ ವಿಜಯವನ್ನು ಸಂಕೇತಿಸುತ್ತದೆ. ಹೀಗಾಗಿ ಒಂಬತ್ತು ದಿನ ನಡೆಯುವ ಉತ್ಸವದಲ್ಲಿ ನವದುರ್ಗೆಯರ ಪೂಜೆ ಇರುತ್ತದೆ. ವಿಜಯದಶಮಿಯಂದು ಆನೆ ಹೊತ್ತ ಅಂಬಾರಿ ಮೇಲೆ ನಾಡದೇವಿ ಚಾಮುಂಡೇಶ್ವರಿಯನ್ನು ಪ್ರತಿಷ್ಠಾಪಿಸಿ ಮೆರವಣಿಗೆ ಮಾಡಲಾಗುತ್ತದೆ. ಮೈಸೂರಿನ ಈ ಉತ್ಸವವು ಶಾಸ್ತ್ರೀಯ ಮತ್ತು ಜನಪದ ಸಂಪ್ರದಾಯಗಳನ್ನು ಪ್ರದರ್ಶಿಸಲು ಒಂದು ವೇದಿಕೆಯಾಗಿದೆ.
ಮೈಸೂರು ಝಗಮಗ
ದಸರಾ ಸಂದರ್ಭದಲ್ಲಿ ಮೈಸೂರು ನಗರ ಝಗಮಗಿಸುತ್ತದೆ. ಆಕರ್ಷಣೀಯ ಕೇಂದ್ರ ಅರಮನೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳು, ವೃತ್ತಗಳು ಮತ್ತು ಪಾರಂಪರಿಕ ಕಟ್ಟಡಗಳು ರಾತ್ರಿ ಸಮಯದಲ್ಲಿ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತವೆ. ದೀಪಾಲಂಕಾರದಿಂದ ಕಂಗೊಳಿಸುವ ಸಾಂಸ್ಕೃತಿಕ ರಾಜಧಾನಿಯನ್ನು ನೋಡುವುದೇ ಚೆಂದ. ದಸರಾ ವೇಳೆ ರಾತ್ರಿ ಹೊತ್ತಿನಲ್ಲಿ ಮೈಸೂರನ್ನು ಸುತ್ತಿ ಪ್ರವಾಸಿಗರು ಪುಳಕಿತರಾಗುತ್ತಾರೆ. ಡಬಲ್ ಡೆಕ್ಕರ್, ಟಾಂಗಾ ಸವಾರಿ ಜನರಿಗೆ ವಿಶೇಷ ಅನುಭೂತಿ ನೀಡುತ್ತದೆ. ದೀಪಗಳಿಂದ ಅರಮನೆ ಕಂಗೊಳಿಸುವುದನ್ನು ನೋಡಲು ಎರಡು ಕಣ್ಣು ಸಾಲದು.
ದಸರಾದಲ್ಲಿ ಏನಿರುತ್ತೆ?
ಮೈಸೂರು ದಸರಾ ಎಂದರೆ, ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹೋತ್ಸವ. 9 ದಿನಗಳ ಕಾಲ ಧಾರ್ಮಿಕ ಆಚರಣೆಗಳು, ವಿವಿಧ ಕಾರ್ಯಕ್ರಮಗಳು ಜರುಗುತ್ತವೆ. ಅರಮನೆಯಲ್ಲಿ ಧಾರ್ಮಿಕ ವಿಧಿವಿಧಾನಗಳು ಜರುಗುತ್ತವೆ. ರಾಜರ ಖಾಸಗಿ ದರ್ಬಾರ್ ಕೂಡ ನಡೆಯುತ್ತದೆ. ದಸರಾ ಆನೆಗಳು ಸಹ ಇದರಲ್ಲಿ ಪಾಲ್ಗೊಳ್ಳಲಿವೆ. ಯುವಜನರಿಗಾಗಿ ಯುವದಸರಾ, ಯುವಸಂಭ್ರಮದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಪ್ರವಾಸಿಗರನ್ನು ಸೆಳೆಯಲು ಫಲಪುಷ್ಪ ಪ್ರದರ್ಶನ, ಆಹಾರ ಮೇಳಗಳು ನಡೆಯುತ್ತವೆ. ಮನೆ ಮನೆಯಲ್ಲೂ ಗೊಂಬೆಗಳನ್ನು ಕೂರಿಸಿ ಜನ ದಸರಾ ಆಚರಿಸುತ್ತಾರೆ. ಕಲಾಸಕ್ತರನ್ನು ಆಕರ್ಷಿಸಲು ಚಲಚಿತ್ರೋತ್ಸವ, ಅರಮನೆಯಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮಗಳು ಜರುಗುತ್ತವೆ.
ಜಂಬೂಸವಾರಿ ಎಂಬ ಆಕರ್ಷಣೆ
ವಿಶ್ವವಿಖ್ಯಾತ ದಸರಾ ಕೇಂದ್ರಬಿಂದು ಎಂದರೆ ಅದು ಜಂಬೂಸವಾರಿ. ದಸರಾ ಆನೆಗಳನ್ನು ಸಿಂಗರಿಸಿ, ಅಲಂಕರಿಸಿದ ಚಿನ್ನದಂಬಾರಿಯನ್ನು ಗಜಪಡೆಯ ಕ್ಯಾಪ್ಟನ್ ಮೇಲೆ ಹೊರಿಸಲಾಗುತ್ತದೆ. ಅಂಬಾರಿಯಲ್ಲಿ ಅಲಂಕಾರಭೂಷಿತಳಾಗಿ ದೇವಿ ಚಾಮುಂಡೇಶ್ವರಿ ವಿರಾಜಮಾನಳಾಗುತ್ತಾಳೆ. ಚಿನ್ನದಂಬಾರಿ ಹೊತ್ತ ಗಜಪಡೆ ಸಾಲಾಗಿ ಅರಮನೆಯಿಂದ ಬನ್ನಿಮಂಪಟದ ವರೆಗೆ ಸಾಗುವ ಮೆರವಣಿಗೆ ಸಾಗುತ್ತದೆ. ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಪ್ರಾದೇಶಿಕ ಪರಂಪರೆಯನ್ನು ಬಿಂಬಿಸುವ ಸ್ತಬ್ದಚಿತ್ರಗಳು ಇರುತ್ತವೆ. ಜಂಬೂಸವಾರಿಯನ್ನು ಕಣ್ತುಂಬಿಕೊಳ್ಳಲು ಜನ ಹಿಂದಿನ ದಿನವೇ ಬಂದು ಮೆರವಣಿಗೆ ಮಾರ್ಗದುದ್ದಕ್ಕೂ ಕಾದು ಕುಳಿತಿರುತ್ತಾರೆ. ಬಿಸಿಲು, ಮಳೆಯನ್ನೂ ಲೆಕ್ಕಿಸದೇ ಮೆರವಣಿಗೆ ವೀಕ್ಷಿಸುತ್ತಾರೆ.