ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) 2025ರ ಅಂಗವಾಗಿ ಸೋಮವಾರ (ಸೆ.22) ಜನಪ್ರಿಯ ಆಹಾರ ಮೇಳ ಹಾಗೂ ದೀಪಾಲಂಕಾರಕ್ಕೆ ಚಾಲನೆ ನೀಡಲಾಯಿತು.
ದೀಪಾಲಂಕಾರ:
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ವಿದ್ಯುತ್ ದೀಪಾಲಂಕಾರಕ್ಕೆ ಇಂಧನ ಸಚಿವರಾದ ಕೆ.ಜೆ.ಜಾರ್ಜ್ (KJ George) ಅವರು ಚಾಲನೆ ನೀಡಿದರು.
ನಗರದ ಸಯ್ಯಾಜಿರಾವ್ ರಸ್ತೆಯಲ್ಲಿರುವ ಹಸಿರು ಚಪ್ಪರದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಇಂಧನ ಸಚಿವರಾದ ಕೆ.ಜೆ. ಜಾರ್ಜ್ ಅವರು ದಸರಾ ವಿದ್ಯುತ್ ದೀಪಾಲಂಕಾರಕ್ಕೆ ವಿಧ್ಯುಕ್ತ ಚಾಲನೆ ನೀಡಿದರು. ಪ್ರತಿ ವರ್ಷದಂತೆ ಈ ವರ್ಷವೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಸೆಸ್ಕ್)ದ ವತಿಯಿಂದ ದಸರಾ ದೀಪಾಲಂಕಾರ ಮಾಡಲಾಗಿದ್ದು, ಕಳೆದ ವರ್ಷಕ್ಕಿಂತಲೂ ಹೆಚ್ಚು ಆಕರ್ಷಣೀಯವಾಗಿ ಈ ಬಾರಿಯ ದೀಪಾಲಂಕಾರ ಕಂಗೊಳಿಸಲಿದೆ. ಈ ಮೂಲಕ ಸಾಂಸ್ಕೃತಿಕ ರಾಜಧಾನಿ ಮೈಸೂರು 21 ದಿನಗಳ ಕಾಲ ದೀಪದ ಬೆಳಕಿನಲ್ಲಿ ಮಿನುಗಲಿದೆ.ಇದನ್ನೂ ಓದಿ: Photo Gallery | ಹೂವು ಚೆಲುವೆಲ್ಲಾ ತನ್ನದೆನ್ನುತ್ತಿದೆ.. ಸಂಗೀತ ಝೇಂಕಾರ ಮನಮುಟ್ಟುತ್ತಿದೆ – ದಸರಾ ಸೊಬಗು ಕಣ್ತುಂಬಿಕೊಳ್ಳಿ
136 ಕಿ.ಮೀ ದೀಪಾಲಂಕಾರ:
ದಸರಾ ಹಿನ್ನೆಲೆಯಲ್ಲಿ ಈ ಬಾರಿ ನಗರದ 136 ಕಿ.ಮೀ ವ್ಯಾಪ್ತಿಯ ರಸ್ತೆಗಳು ಹಾಗೂ 118 ವೃತ್ತಗಳಲ್ಲಿ ದೀಪಾಲಂಕಾರ ಮಾಡಲಾಗಿದೆ. ಇದರೊಂದಿಗೆ ನಗರದ ಪ್ರಮುಖ ಕಡೆಗಳಲ್ಲಿ ಎಲ್‌ಇಡಿ ಬಲ್ಬ್ಗಳಿಂದ ನಿರ್ಮಿಸಲಾದ 80 ವಿವಿಧ ಪ್ರತಿಕೃತಿಗಳನ್ನು ಇರಿಸಲಾಗಿದೆ. ನಿಗದಿಯಂತೆ ಸೆ.22ರಿಂದ ಅ.2ರವರೆಗೆ ವಿದ್ಯುತ್ ದೀಪಾಲಂಕಾರ ನಡೆಯಲಿದ್ದು, ಇದರೊಂದಿಗೆ ಮುಖ್ಯಮಂತ್ರಿಗಳ ನಿರ್ದೇಶನದಂತೆ 10 ದಿನಗಳು ವಿಸ್ತರಣೆ ಮಾಡಿಲಾಗಿದೆ, ಈ ಮೂಲಕ ಒಟ್ಟು 21 ದಿನಗಳ ಕಾಲ ವಿದ್ಯುತ್ ದೀಪಾಲಂಕಾರ ಇರಲಿದೆ. ಇದಕ್ಕಾಗಿ 300 ಕಿ.ಲೋ ವ್ಯಾಟ್‌ಗಳ, 2,57,520 ಯೂನಿಟ್ ವಿದ್ಯುತ್ ಬಳಕೆ ಮಾಡಲಾಗುತ್ತಿದೆ.
ಕೋಲ್ಕತ್ತಾ ಲೈಟಿಂಗ್ ಮೆರಗು :
ದಸರಾ ದೀಪಾಲಂಕಾರದ ಆಕರ್ಷಣೆ ಹೆಚ್ಚಿಸುವ ನಿಟ್ಟಿನಲ್ಲಿ ಈ ಬಾರಿ ಕೋಲ್ಕತ್ತಾ ಮಾದರಿ ಲೈಟಿಂಗ್ ಸಹ ಅಳವಡಿಸಲಾಗಿದೆ. ಇದರ ಮೂಲಕವಾಗಿ ನಗರದ ಹಲವು ಕಡೆಗಳಲ್ಲಿ ಬಣ್ಣಬಣ್ಣದ ದೀಪಗಳಿಂದ ಅಲಂಕರಿಸುವ ಮೂಲಕ ದಸರಾ ವಿದ್ಯುತ್ ದೀಪಾಲಂಕಾರದ ಮೆರಗು ಹೆಚ್ಚಿಸಲಾಗಿದೆ.
ಕಂಗೊಳಿಸುತ್ತಿದೆ ಮೈಸೂರು:
ಇಡೀ ಮೈಸೂರು ನಗರ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ಪ್ರಮುಖವಾಗಿ ಅರಮನೆ ಸುತ್ತಲಿನ ರಸ್ತೆಗಳು ಸೇರಿದಂತೆ ಸಯ್ಯಾಜಿರಾವ್ ರಸ್ತೆ, ಇರ್ವಿನ್ ರಸ್ತೆ, ಅಲ್ಬರ್ಟ್ ವಿಕ್ಟರ್ ರಸ್ತೆ, ಜೆಎಲ್‌ಬಿ ರಸ್ತೆ, ಚಾಮರಾಜ ಜೋಡಿರಸ್ತೆ, ಹೊರವಲಯದಲ್ಲಿನ ಪ್ರಮುಖ ಹೆದ್ದಾರಿಗಳಿಗೂ ದೀಪಾಲಂಕಾರ ಮಾಡಲಾಗಿದೆ. ನಗರ ವ್ಯಾಪ್ತಿಯಲ್ಲಿರುವ ಪ್ರಮುಖ ವೃತ್ತಗಳಿಗೂ ಆಕರ್ಷಕ ದೀಪಾಲಂಕಾರ ಮಾಡಲಾಗಿದೆ. ಇದಲ್ಲದೆ ದೊಡ್ಡಕೆರೆ ಮೈದಾನ, ಕೆ.ಆರ್.ವೃತ್ತ, ಚಾಮರಾಜ ವೃತ್ತ, ಜಯಚಾಮರಾಜ ವೃತ್ತ, ರಾಮಸ್ವಾಮಿ ವೃತ್ತ, ರೈಲ್ವೆ ನಿಲ್ದಾಣ ಸಮೀಪ, ಗನ್‌ಹೌಸ್, ಎಲ್‌ಐಸಿ ವೃತ್ತ ಸೇರಿದಂತೆ ವಿವಿಧೆಡೆ ಹಲವು ಕಲಾಕೃತಿಗಳನ್ನು ನಿರ್ಮಿಸಲಾಗಿದೆ.ಇದನ್ನೂ ಓದಿ: ಮೈಸೂರು ರೇಷ್ಮೆ ಸೀರೆ, ಮಲ್ಲಿಗೆ ಮುಡಿದು ಚಾಮುಂಡಿ ತಾಯಿಯ ಸೀರೆ ಪಡೆದ ಬಾನು ಮುಷ್ತಾಕ್
ಅಗತ್ಯ ಸುರಕ್ಷತಾ ಕ್ರಮಗಳು:
ದಸರಾ ವಿದ್ಯುತ್ ದೀಪಾಲಂಕಾರದಲ್ಲಿ ಸೆಸ್ಕ್ ವತಿಯಿಂದ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗಿದ್ದು, ಆ ಮೂಲಕ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ. ಪ್ರಮುಖವಾಗಿ ದೀಪಾಲಂಕಾರದ ಕಂಬಗಳನ್ನು ಮುಟ್ಟದೆ, ಅಂತರ ಕಾಯ್ದುಕೊಳ್ಳುವುದು, ದೀಪಾಲಂಕಾರದ ಕಂಬಗಳ ಹತ್ತಿರ ನಿಂತು ಫೋಟೋ/ವಿಡಿಯೋ ಶೂಟ್ ಮಾಡುವುದನ್ನು ತಪ್ಪಿಸುವುದು, ಮಳೆ ಸಂದರ್ಭದಲ್ಲಿ ವಿದ್ಯುತ್/ದೀಪಾಲಂಕಾರದ ಕಂಬಗಳ ಹತ್ತಿರ ಹೋಗದೆ ಎಚ್ಚರವಹಿಸುವುದು, ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ದೀಪಾಲಂಕಾರಕ್ಕಾಗಿ ಕಂಬಗಳನ್ನು ಅಳವಡಿಸಿದ್ದು, ವಾಹನ ಸವಾರರು ಈ ಬಗ್ಗೆ ನಿಗಾವಹಿಸಿ ಸುರಕ್ಷಿತವಾಗಿ ಸಂಚರಿಸುವಂತೆ, ವಿದ್ಯುತ್ ಸಂಬಂಧಿತ ದೂರು/ದೀಪಾಲಂಕಾರದಿಂದ ತೊಂದರೆ ಆದಲ್ಲಿ ಸಹಾಯವಾಣಿ 1912 ಸಂಖ್ಯೆಗೆ ಸಂಪರ್ಕಿಸುವಂತೆ ಕೋರಲಾಗಿದೆ.
ಆಕರ್ಷಕ ಡ್ರೋನ್ ಶೋ:
ದಸರಾ ಮಹೋತ್ಸವದ ಹೊಸ ಆಕರ್ಷಣೆಯಾಗಿರುವ ಡ್ರೋನ್ ಪ್ರದರ್ಶನ ಈ ಬಾರಿ ಮತ್ತಷ್ಟು ವರ್ಣರಂಜಿತವಾಗಿರಲಿದೆ. ಕಳೆದ ಬಾರಿ 1,500 ಡ್ರೋನ್ ಬಳಸಿಕೊಂಡು ನಡೆಸಲಾಗಿದ್ದ ಡ್ರೋನ್ ಪ್ರದರ್ಶನದಲ್ಲಿ ಈ ಬಾರಿ 3,000 ಸಾವಿರ ಡ್ರೋನ್ ಬಳಸಿಕೊಂಡು ನಡೆಸಲಾಗುತ್ತದೆ. ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಸೆ.28, 29 ಮತ್ತು ಅಕ್ಟೋಬರ್ 1 ಮತ್ತು 2ರಂದು ಡ್ರೋನ್ ಪ್ರದರ್ಶನ ನಡೆಯಲಿದೆ.
ಆಹಾರ ಮೇಳ:
ಮಹಾರಾಜ ಕಾಲೇಜು ಮೈದಾನದಲ್ಲಿ “ರುಚಿಯೊಂದಿಗೆ ಸ್ವಚ್ಛತೆಯ ಸಿರಿ” ಎಂಬ ಧ್ಯೇಯ ವಾಕ್ಯದೊಂದಿಗೆ ಜನಪ್ರಿಯ ಆಹಾರ ಮೇಳವನ್ನು ಆಯೋಜಿಸಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್.ಮುನಿಯಪ್ಪ ಅವರು ಉದ್ಘಾಟಿಸಿದರು.
ಈ ಮೇಳದಲ್ಲಿ ಒಟ್ಟು 160ಕ್ಕೂ ಹೆಚ್ಚು ಮಳಿಗೆಗಳು ತೆರೆದಿದ್ದು, ಅವುಗಳಲ್ಲಿ 121 ಸಸ್ಯಾಹಾರಿ ಹಾಗೂ 39 ಮಾಂಸಾಹಾರಿ ಮಳಿಗೆಗಳಿವೆ. ಇಲ್ಲಿ ಸ್ಥಳೀಯವಾಗಿ ಮೈಸೂರಿನ ವಿಶೇಷ ಆಹಾರ ಶೈಲಿ, ಬುಡಕಟ್ಟು, ಮಲೆನಾಡು, ಕೊಡವ, ಕರಾವಳಿ, ಉತ್ತರ ಹಾಗೂ ಮಧ್ಯ ಕರ್ನಾಟಕದ ಪಾಕಶೈಲಿಗಳ ಜೊತೆಗೆ ಗುಜರಾತಿ, ರಾಜಸ್ಥಾನಿ, ಹೈದರಾಬಾದಿ, ಕೇರಳ, ಚೈನೀಸ್ ಮತ್ತು ಅಂತಾರಾಷ್ಟ್ರೀಯ ಪಾಕಶೈಲಿಗಳನ್ನು ಪರಿಚಯಿಸಲಾಗಿದೆ.
ಈ ಮೇಳಕ್ಕೆ ಪ್ರವಾಸಿಗರು ಮತ್ತು ಸಾರ್ವಜನಿಕರು ತಮ್ಮ ಕುಟುಂಬ ಸಮೇತ ಭೇಟಿ ನೀಡಿ, ವಿವಿಧ ಶೈಲಿಯ ಆಹಾರ ಪದ್ಧತಿಗಳ ಪರಿಚಯ ಪಡೆದು, ತಮಗೆ ಇಷ್ಟವಾದ ಭೋಜನಗಳನ್ನು ಸವಿಯಲು ಒಂದು ಅಪೂರ್ವ ಅವಕಾಶವನ್ನು ಒದಗಿಸುತ್ತದೆ.ಇದನ್ನೂ ಓದಿ: Mysuru Dasara | ನೀಲಿ ಜರಿ ಸೀರೆಯಿಂದ ಕಂಗೊಳಿಸುತ್ತಿರುವ ಚಾಮುಂಡಿ ದೇವಿ