ಮಡಿಕೇರಿ: ಟ್ರಾಫಿಕ್ ನಿಯಂತ್ರಿಸುತ್ತಿದ್ದ ಎಎಸ್‍ಐ ಒಬ್ಬರಿಗೆ ಓಮ್ನಿ ಕಾರು ಡಿಕ್ಕಿ ಹೊಡೆ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ನಡೆದಿದೆ.
ಟ್ರಾಫಿಕ್ ಪೊಲೀಸ್ ಸೂಚನೆಯನ್ನು ಮೀರಿ ಚಾಲಕ ವಾಹನ ಚಾಲನೆ ಮಾಡಿದ್ದರಿಂದ ಘಟನೆ ನಡೆದಿದ್ದು, ವೃತ್ತದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಅಪಘಾತದ ವಿಡಿಯೋ ಸೆರೆಯಾಗಿದೆ.
Advertisement
ಶನಿವಾರ ಮುಂಜಾನೆ ದಸರಾ ಮ್ಯಾರಥಾನ್ ಸಂದರ್ಭದಲ್ಲಿ ಮಡಿಕೇರಿ ನಗರ ಟ್ರಾಫಿಕ್ ಎಎಸ್‍ಐ ಮಹದೇವಯ್ಯ ಸಂಚಾರ ದಟ್ಟಣೆ ನಿಯಂತ್ರಣ ಮಾಡುತ್ತಿದ್ದರು. ಈ ವೇಳೆ ಮಾರುತಿ ಓಮ್ನಿ ಕಾರುಚಾಲಕನಿಗೆ ಕಾರು ನಿಲ್ಲಿಸುವಂತೆ ಮಹದೇವಯ್ಯ ಸೂಚನೆ ನೀಡಿದ್ದಾರೆ. ಆದರೆ ಕೆಎ 12 ಎನ್ 0104 ನೋಂದಣಿಯ ಮಾರುತಿ ಓಮ್ನಿ ಕಾರು ಚಾಲಕ ಅಚಾತುರ್ಯದಿಂದ ಸೂಚನೆಯನ್ನು ದಿಕ್ಕರಿಸಿ ಕಾರು ಚಲಾಯಿಸಿ ಮಹದೇವಯ್ಯನವರಿಗೆ ಗುದ್ದಿದ್ದಾನೆ.
Advertisement
ಡಿಕ್ಕಿಯ ರಭಸಕ್ಕೆ ದೂರಕ್ಕೆ ಎಸೆಯಲ್ಪಟ್ಟ ಮಹದೇವಯ್ಯ ಎದುರಿನಿಂದ ಬರುತ್ತಿದ್ದ ಸರ್ಕಾರಿ ಬಸ್ಸಿನ ಚಕ್ರಕ್ಕೆ ಸಿಲುಕುವುದರಲ್ಲಿದ್ದರು. ಅಷ್ಟರಲ್ಲಿ ಚಾಲಕ ತಕ್ಷಣ ಬ್ರೇಕ್ ಹಾಕುವ ಮೂಲಕ ಬಸ್ಸನ್ನು ನಿಲ್ಲಿಸಿದ. ಇನ್ನೇನು ಬಸ್ ಚಕ್ರಕ್ಕೆ ಸಿಲುಕಿಕೊಂಡರು ಎನ್ನುವಷ್ಟರಲ್ಲಿ ಟ್ರಾಫಿಕ್ ಪೊಲೀಸ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Advertisement
ಇತರ ಪೊಲೀಸರು ಹಾಗೂ ಸಾರ್ವಜನಿಕರು ಟ್ರಾಫಿಕ್ ಪೋಲೀಸ್ ಮಹದೇವಯ್ಯ ಅವರನ್ನು ತಕ್ಷಣ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಅಸ್ಪತ್ರೆಗೆ ದಾಖಲಿಸಿದರು. ಸದ್ಯ ಎಎಸ್‍ಐ ಮಹದೇವಯ್ಯರ ಬಲಗೈ ಮಣಿಕಟ್ಟು ಮುರಿದಿದ್ದು ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
ಘಟನೆಗೆ ಕಾರಣವಾದ ಮಾರುತಿ ಓಮ್ನಿ ಕಾರು ಮತ್ತು ಚಾಲಕನನ್ನು ಮಡಿಕೇರಿ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಪ್ರಕರಣ ಕೂಡ ದಾಖಲಿಸಿಕೊಂಡಿದ್ದಾರೆ. ಈ ಘಟನೆಯ ವಿಡಿಯೋ ವೃತ್ತದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಅಗಿದೆ.