ಮೈಸೂರು: ವಿಶ್ವವಿಖ್ಯಾತ ದಸರಾ ಮುಗಿದಿದ್ದರೂ, ಸಾಂಸ್ಕೃತಿಕ ನಗರದಲ್ಲಿ ದಸರಾ ಸಂಭ್ರಮ ಮಾತ್ರ ಇನ್ನೂ ಮುಗಿದಿಲ್ಲ. ದಸರಾ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಮಟ್ಟದ ಗಾಳಿಪಟ ಉತ್ಸವದಲ್ಲಿ ವಿಧವಿಧವಾದ ಗಾಳಿಪಟಗಳು ಭಾನಂಗಳದಲ್ಲಿ ಚಿತ್ತಾರ ಮೂಡಿಸಿ, ಎಲ್ಲರ ಗಮನ ಸೆಳೆದಿದೆ.
ಪ್ರವಾಸೋದ್ಯಮ ಇಲಾಖೆ ವತಿಯಿಂದ ಆಯೋಜಿಸಿದ ರಾಷ್ಟ್ರೀಯ ಮಟ್ಟದ ದಸರಾ ಗಾಳಿಪಟ ಉತ್ಸವ ಎಲ್ಲರ ಮನ ಗೆದ್ದಿದೆ. ಆಗಸದಲ್ಲಿ ಹಾರಾಡ್ತಿರೋ ಮಿಕ್ಕಿಮೌಸ್, ಗರುಡ, ಹುಲಿ, ಟೆಡ್ಡಿ, ಮೀನು, ಅಕ್ಟೋಪಸ್, ಸ್ಟಂಟ್ ಕೈಟ್, ಪುಷ್ಪಕ ವಿಮಾನ, ಕತಕಳಿ, ದುರ್ಗಾ, ಯಕ್ಷಗಾನ ಹೀಗೆ ಬಗೆ ಬಗೆಯ ಚಿತ್ತಾಕರ್ಷಕ ಗಾಳಿಪಟಗಳು ಜನರನ್ನ ಆಕರ್ಷಿಸಿದೆ.
ಗುಜರಾತ್, ಸೂರತ್, ರಾಜ್‍ಕೋಟ್, ಬೆಳಗಾವಿ, ಮಂಗಳೂರು, ಹೈದರಾಬಾದ್ ಸೇರಿದಂತೆ 8 ತಂಡಗಳು ಆಗಮಿಸಿದ್ದು, ಸುಮಾರು 250ಕ್ಕೂ ಹೆಚ್ಚು ಗಾಳಿಪಟಗಳನ್ನು ಹಾರಿಸಲಾಯ್ತು. ಈ ಸಂಭ್ರಮವನ್ನು ವೀಕ್ಷಿಸಿದ ಪ್ರವಾಸಿಗರು ಬಗೆ ಬಗೆಯ ಗಾಳಿಪಟಗಳನ್ನ ನೋಡಿ ಖುಷಿಪಟ್ಟರು.