– ಮೈಸೂರು ದಸರಾಗೆ ಪ್ರೇರಣೆಯಾದ ಹೇಮಗುಡ್ಡ ದಸರಾ
ಕೊಪ್ಪಳ: ಜಂಬೂಸವಾರಿ ಅಂದ ಕೂಡಲೇ ಎಲ್ಲರಿಗೂ ನೆನಪಾಗೋದು ಮೈಸೂರು. ದಸರಾ ಹಬ್ಬದ ದಿನ ಜಗತ್ತಿನ ಕಣ್ಣು ಮೈಸೂರು ಅಂಬಾರಿಯ ಮೇಲಿರುತ್ತದೆ. ಆದರೆ, ಆ ಜಂಬೂ ಸವಾರಿಗೆ ಕಲ್ಯಾಣ ಕರ್ನಾಟಕದಲ್ಲಿ ಪ್ರೇರಣೆ ಸಿಕ್ಕಿತ್ತು ಎಂಬ ಮಾಹಿತಿ ಇದೆ. ಅದರಂತೆ ಕೊಪ್ಪಳದ (Koppal) ಹೇಮಗುಡ್ಡದಲ್ಲಿ ಅದ್ದೂರಿಯಾಗಿ ಜಂಬೂಸವಾರಿ ನಡೆದಿದೆ.
ಮೈಸೂರು ದಸರಾ ಜಂಬೂಸವಾರಿಯಂತೆಯೇ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೇಮಗುಡ್ಡದಲ್ಲಿ ಪ್ರತಿ ವರ್ಷ ಜಂಬೂಸವಾರಿ ನಡೆಯುತ್ತದೆ. 11ನೇ ಶತಮಾನದಲ್ಲಿ ಶುರುವಾದ ದಸರಾ ಜಂಬೂಸವಾರಿ, ಇಂದು ವಿಶ್ವವಿಖ್ಯಾತ ಮೈಸೂರು ದಸರಾ ಆಗಿ ಪ್ರಸಿದ್ಧಿ ಪಡೆದಿದೆ.ಇದನ್ನೂ ಓದಿ: ಮುಂದಿನ ವರ್ಷ ಅಂಬಾರಿ ಹೊತ್ತರೆ ʻಅಭಿಮನ್ಯು ಯುಗʼ ಮುಗಿಯಿತು – ಮುಂದಿನ ಸಾರಥಿ ಯಾರು?
11ನೇ ಶತಮಾನದಲ್ಲಿ ಕುಮಾರರಾಮನ ಸಾಮ್ರಾಜ್ಯದ ದೇವತೆಯಾದ ದುರ್ಗಾಪರಮೇಶ್ವರಿ ದೇವಿಗೆ ಪ್ರತಿ ವರ್ಷ ಗಜಪಡೆಯ ಮೇಲೆ ಜಂಬೂಸವಾರಿ ನಡೆಸಲಾಗುತ್ತಿತ್ತು. ಬಳಿಕ ಈ ಪರಂಪರೆಯನ್ನು 14ನೇ ಶತಮಾನದಲ್ಲಿ ವಿಜಯನಗರ ಅರಸರು ಮುಂದುವರೆಸಿಕೊಂಡು ಬಂದಿದ್ದರು. ನಂತರ ಅದು ಮೈಸೂರು ಅರಸರ ಕಾಲದಲ್ಲಿ ಚಿನ್ನದ ಅಂಬಾರಿಯ ಮೇಲೆ ಜಂಬೂಸವಾರಿ ನಡೆಯುತ್ತಾ ಇಂದು ವಿಶ್ವವಿಖ್ಯಾತಿ ಪಡೆದಿದೆ. ಆದರೆ, ಮೈಸೂರು ಜಂಬೂಸವಾರಿಯ ಮೂಲ ಸ್ಥಾನ ಅಂದಿನ ಕುಮ್ಮಟದುರ್ಗ ಇಂದಿನ ಹೇಮಗುಡ್ಡದಲ್ಲಿದೆ. ಮೈಸೂರು ದಸರಾಗೂ ಒಂದು ದಿನ ಮೊದಲು ಆಯುಧ ಪೂಜೆಯ ದಿನ ದುರ್ಗಾಪರಮೇಶ್ವರಿ ದೇವಿಗೆ ಆನೆಯ ಮೇಲೆ ಅದ್ಧೂರಿಯಾಗಿ ಜಂಬೂ ಸವಾರಿ ನೆರವೇರುತ್ತದೆ.
ಮೈಸೂರು ದಸರಾಗೆ ಪ್ರೇರಣೆಯಾದ ಹೇಮಗುಡ್ಡ ದಸರಾ ಅನಾದಿಕಾಲದಿಂದಲೂ ಕೂಡ ಪ್ರತಿ ವರ್ಷ ಕಟ್ಟಿಗೆಯ ಅಂಬಾರಿಯಲ್ಲಿ ದೇವಿಯ ಮೆರವಣಿಗೆ ನಡೆಸಲಾಗುತ್ತದೆ, ಮೆರವಣಿಗೆಯಲ್ಲಿ ಕೊಪ್ಪಳ, ಗಂಗಾವತಿ ಸುತ್ತಲಿನ ಜನರು ಭಾಗವಹಿಸಿ, ದಸರಾ ವೈಭೋಗವನ್ನ ಕಣ್ತುಂಬಿಕೊಳ್ಳುತ್ತಾರೆ. ಮೈಸೂರು ದಸರಾ ಮಾದರಿಯಲ್ಲೇ ನಡೆಯುವ ದುರ್ಗಾಪರಮೇಶ್ವರಿ ದೇವಿಯ ಜಂಬೂಸವಾರಿ ಕಲ್ಯಾಣ ಕರ್ನಾಟಕ ಭಾಗದ ದಸರಾ ಎಂದೇ ಖ್ಯಾತಿ ಪಡೆದಿದೆ.
ಶರನ್ನವರಾತ್ರಿ ಅಂಗವಾಗಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಗಳು, ಸಾಮೂಹಿಕ ವಿವಾಹ ಸಹ ಹೇಮಗುಡ್ಡದಲ್ಲಿ ನಡೆಯುತ್ತವೆ.ಇದನ್ನೂ ಓದಿ: ಜಂಬೂಸವಾರಿಗೆ ಕ್ಷಣಗಣನೆ – ಮೆರವಣಿಗೆಯಲ್ಲಿ 58 ಸ್ತಬ್ಧಚಿತ್ರ ಸೇರಿ 150ಕ್ಕೂ ಹೆಚ್ಚು ಕಲಾತಂಡಗಳು ಭಾಗಿ