ಬೆಂಗಳೂರು: ನಿನಗೆ ಮೈಸೂರು ದಸರಾದ ಉಸ್ತುವಾರಿಯಾಗಿ ಮಾಡಿದ್ದೇನೆ. ಅದನ್ನು ಬಿಟ್ಟು ಇಲ್ಲಿಗೇಕೆ ಬಂದಿದ್ದಿಯಾ ಎಂದು ವಸತಿ ಸಚಿವ ವಿ.ಸೋಮಣ್ಣ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮಾಷೆಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇಂದು ವಿಧಾನಸೌಧದ ಮುಖ್ಯಮಂತ್ರಿಗಳ ಕೊಠಡಿಯಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಬಂದಿದ್ದ ಸಂದರ್ಭದಲ್ಲಿ ವಿ.ಸೋಮಣ್ಣ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ತಮಾಷೆಯಾಗೆ ಕ್ಲಾಸ್ ತೆಗೆದುಕೊಂಡ ಸಿಎಂ, ನಿನಗೆ ಮೈಸೂರು ದಸರಾದ ಉಸ್ತುವಾರಿಯಾಗಿ ಮಾಡಿದ್ದೇನೆ. ಅದನ್ನು ಸರಿಯಾಗಿ ನೋಡಿಕೊಂಡು ಹೋಗಯ್ಯ ಅಂದ್ರೆ ಇಲ್ಲಿಗೆ ಯಾಕೆ ಬಂದಿದ್ದಿಯಾ ಎಂದು ಪ್ರಶ್ನಿಸಿದ್ದಾರೆ.
ಯಾವಾಗ ನೋಡಿದರೂ ಸ್ವಾಮೀಜಿಗಳನ್ನೆ ಭೇಟಿ ಮಾಡುತ್ತಿರುತ್ತೀಯಾ, ಹೋಗಿ ಮೈಸೂರಿನಲ್ಲಿರು. ಸರಿಯಾಗಿ ದಸರೆಯ ಉಸ್ತುವಾರಿ ಮಾಡು. ಅಲ್ಲಿನ ಕುಂದು ಕೊರತೆಗಳನ್ನು ನಿಭಾಯಿಸು ಎಂದು ಸಚಿವ ಸೋಮಣ್ಣ ಅವರಿಗೆ ಸಿಎಂ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ.
ನೆರೆ ಬಗ್ಗೆ ಪರಿಶೀಲನೆ ಮಾಡಿ ಮಾಹಿತಿ ನೀಡುವುದಕ್ಕೆ ಆರ್.ಅಶೋಕ್ ಅವರನ್ನು ಮೈಸೂರಿನ ಉಸ್ತುವಾರಿಯನ್ನಾಗಿ ಮಾಡಲಾಗಿತ್ತು. ಅಶೋಕ್ ಅವರೇ ಜಿಲ್ಲಾ ಉಸ್ತುವಾರಿ ಆಗುತ್ತಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ದಸರಾ ಗಜಪಡೆಗೆ ಚಾಲನೆ ನೀಡುವಾಗ ಸೋಮಣ್ಣ ಅವರು ಮೈಸೂರಿನ ಉಸ್ತುವಾರಿ ಆರ್.ಅಶೋಕ್ ಆದರೆ ನನಗೆ ಸಂತೋಷ ಎಂದು ಹೇಳಿದ್ದರು. ಆದರೆ ಅಷ್ಟರಲ್ಲಿ ಸರ್ಕಾರ ವಿ.ಸೋಮಣ್ಣ ಅವರನ್ನು ಜಿಲ್ಲಾ ಉಸ್ತುವಾರಿ ಆಗಿ ನೇಮಕ ಮಾಡಿ ಆದೇಶಿಸಿತ್ತು. ಮುಂದಿನ ತಿಂಗಳು ದಸರಾ ಬರುತ್ತಿರುವ ಕಾರಣ ತರಾತುರಿಯಲ್ಲಿ ಸೋಮಣ್ಣ ಅವರನ್ನು ಜಿಲ್ಲಾ ಉಸ್ತುವಾರಿಯಾಗಿ ನೇಮಕ ಮಾಡಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು.