ಮೈಸೂರು: ಮೈಸೂರು ದಸರೆಗಾಗಿ ಆಗಮಿಸಿರುವ ಕ್ಯಾಪ್ಟನ್ ಅರ್ಜುನ ನೇತೃತ್ವದ ಮೊದಲ ಗಜಪಡೆಯ ಟೀಂ ರಾಜಬೀದಿಯಲ್ಲಿ ತಾಲೀಮು ಆರಂಭಿಸಿದೆ.
ಅಂಬಾರಿ ಮೆರವಣಿಗೆ ವೇಳೆಗೆ ಆನೆಗಳು ಮತ್ತಷ್ಟು ಶಕ್ತಿಶಾಲಿ ಆಗಬೇಕಿದ್ದು, ತಾಲೀಮು ಆರಂಭಿಸುವ ಮುನ್ನ ಅವುಗಳ ತೂಕ ಪರೀಕ್ಷೆ ನಡೆಸಲಾಗುತ್ತದೆ. ಗಜಪಡೆಯ ಆರೈಕೆ ಹಾಗೂ ಆರೋಗ್ಯದ ಮೇಲೆ ನಿಗಾ ಇಡುವ ಸಲುವಾಗಿ ಅರಣ್ಯ ಇಲಾಖೆಯೂ ಈ ಪರೀಕ್ಷೆ ನಡೆಸುತ್ತದೆ. ಕಳೆದ ಬಾರಿ ದಸರಾ ಮುಗಿಸಿ ಕಾಡಿಗೆ ಹಿಂದಿರುಗಿದ್ದ ಗಜಪಡೆಯ ತೂಕಕ್ಕೂ ಇವತ್ತಿನ ತೂಕಕ್ಕೂ ಇರುವ ವ್ಯತ್ಯಾಸದ ಕುರಿತ ಇನ್‍ಟ್ರೆಸ್ಟಿಂಗ್ ಅಂಶಗಳು ಇಂತಿದೆ.
Advertisement
Advertisement
ಇಂದು ಟ್ರಕ್‍ಗಳ ತೂಕ ಹಾಕುವ ಕೇಂದ್ರದಲ್ಲಿ ಆನೆಗಳ ತೂಕ ಪರೀಕ್ಷಿಸಲಾಯಿತು. ಕ್ಯಾಪ್ಟನ್ ಅರ್ಜುನ, ವರಲಕ್ಷ್ಮಿ, ವಿಕ್ರಮ, ಧನಂಜಯ, ಗೋಪಿ ಮತ್ತು ಚೈತ್ರ ಆನೆಗಳ ದೇಹ ತೂಕ ಪರೀಕ್ಷಿಸಲಾಯಿತು. ಕಳೆದ ವರ್ಷ 5,250 ಕೆಜಿ ತೂಕವಿದ್ದ ಕ್ಯಾಪ್ಟನ್ ಅರ್ಜುನ ಈಗ 5,650 ಕೆಜಿ ತೂಕವಿದ್ದಾನೆ. ಅಲ್ಲಿಗೆ, ಒಂದು ವರ್ಷಕ್ಕೆ 400 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾನೆ. ಇನ್ನೂ ವರಲಕ್ಷ್ಮಿ ಆನೆ 3,120 ಕೆಜಿ ತೂಕವಿದೆ. ಕಳೆದ ವರ್ಷ ಈ ಆನೆ 2,830 ಕೆಜಿ ಇತ್ತು. ಅಲ್ಲಿಗೆ 290 ಕೆಜಿ ತೂಕವನ್ನು ವರಲಕ್ಷ್ಮಿ ಹೆಚ್ಚಿಸಿಕೊಂಡಿದೆ.
Advertisement
Advertisement
ವಿಕ್ರಮ ಆನೆ 3,985 ಕೆಜಿ, ಗೋಪಿ 4,435 ಕೆಜಿ, ಚೈತ್ರಾ 2,920 ಕೆಜಿ ಹಾಗೂ ಇದೇ ಮೊದಲ ಬಾರಿಗೆ ದಸರಾದಲ್ಲಿ ಭಾಗವಹಿಸುತ್ತಿರುವ ಧನಂಜಯ ಆನೆ 4,045 ಕೆಜಿ ತೂಕವಿದ್ದಾನೆ. ಅಲ್ಲಿಗೆ ಮೊದಲ ತಂಡದ ಆನೆಗಳಲ್ಲಿ ಕ್ಯಾಪ್ಟನ್ ಅರ್ಜುನ ಹೆಚ್ಚು ಬಲಶಾಲಿಯಾಗಿದ್ದಾನೆ. ಉಳಿದಂತೆ ಎಲ್ಲಾ ಆನೆಗಳು ಸದೃಢವಾಗಿವೆ. ಆನೆಗಳ ಬಲವನ್ನು ಇನ್ನಷ್ಟು ಹೆಚ್ಚಿಸಲು ಇಂದಿನಿಂದ ಪೌಷ್ಠಿಕ ಆಹಾರ ನೀಡಲಾಗುತ್ತದೆ. ಬೆಲ್ಲ, ತೆಂಗಿನಕಾಯಿ, ಭತ್ತ, ಮುದ್ದೆ, ಬೆಣ್ಣೆ ಸೇರಿದಂತೆ ಪೌಷ್ಠಿಕವಾದ ಕಾಳು, ಹಸಿರು ಹುಲ್ಲನ್ನು ಪ್ರತಿ ದಿನವೂ ನಾಲ್ಕೈದು ಬಾರಿ ಆನೆಗಳಿಗೆ ನೀಡಿ ಅವುಗಳನ್ನು ಇನ್ನಷ್ಟು ಬಲಶಾಲಿ ಆಗುವಂತೆ ಮಾಡಲಾಗುತ್ತದೆ.
ನಾಡಿನಲ್ಲಿ ಒಂದೂವರೆ ತಿಂಗಳು ಸಿಗುವ ರಾಜಾತಿಥ್ಯದಲ್ಲಿ ಆನೆಗಳು ತಮ್ಮ ಬಲವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವುದರಲ್ಲಿ ಅನುಮಾನಗಳೇ ಇಲ್ಲ. ವಿಜಯದಶಮಿ ಮೆರವಣಿಗೆಯಲ್ಲಿ ಐದು ಕಿಮೀ ದೂರವನ್ನು ಈ ಆನೆಗಳು ಕ್ರಮಿಸುತ್ತದೆ. ಹೀಗಾಗಿ ಆನೆಗಳ ಸಾರ್ಮಥ್ಯದ ಮೇಲೆ ಅರಣ್ಯ ಇಲಾಖೆ ಹೆಚ್ಚು ನಿಗಾವಹಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv