ಇನ್ನೇನು ದಸರಾಗೆ ಕೆಲವೇ ದಿನಗಳು ಬಾಕಿಯಿವೆ. ನಾಳೆಯಿಂದಲೇ ನವರಾತ್ರಿ ಆರಂಭವಾಗುತ್ತಿದೆ. ಒಂಭತ್ತು ದಿನ ಬೇರೆ ಬೇರೆ ಬಣ್ಣದ ಸೀರೆ ಹಾಕಿಕೊಳ್ಳುವಂತೆ ಪ್ರತಿ ದಿನವೂ ವಿಭಿನ್ನ ಸಿಹಿ ಖಾದ್ಯವನ್ನು ಮಾಡಿ, ದೇವರಿಗೆ ಅರ್ಪಿಸಿ.
ಹೌದು, ಸಜ್ಜಕದ ಹೋಳಿಗೆ ಉತ್ತರ ಕರ್ನಾಟಕದಲ್ಲಿ ಮಾಡುವ ಒಂದು ಸಿಹಿ ಖಾದ್ಯ. ನವರಾತ್ರಿ ಹಬ್ಬವಷ್ಟೇ ಅಲ್ಲ. ಬೇರೆ ಹಬ್ಬದ ಸಂದರ್ಭದಲ್ಲಿಯೂ ಸಜ್ಜಕದ ಹೋಳಿಗೆಯನ್ನು ಮಾಡಿ ದೇವರಿಗೆ ಅರ್ಪಿಸುತ್ತಾರೆ. ಹೂರಣದ ಒಬ್ಬಟ್ಟು, ಕಾಯಿ ಒಬ್ಬಟ್ಟನ್ನು ಮಾಡುವಂತೆಯೇ ಈ ಸಜ್ಜಕದ ಒಬ್ಬಟ್ಟನ್ನು ಮಾಡುತ್ತಾರೆ. ಆದರೆ ಇದನ್ನು ತಯಾರಿಸಲು ಬಳಸುವ ಸಾಮಗ್ರಿಗಳು ಮಾತ್ರ ಬೇರೆಯಾಗಿರುತ್ತದೆ. ವಿಧಾನ ಹೆಚ್ಚು ಕಡಿಮೆ ಒಂದೇ ರೀತಿಯಾಗಿರುತ್ತದೆ.
ಬೇಕಾಗುವ ಸಾಮಗ್ರಿಗಳು:
ದಪ್ಪ ರವೆ
ಗೋಧಿ ಹಿಟ್ಟು
ಎಣ್ಣೆ
ನೀರು
ಬೆಲ್ಲ
ತುಪ್ಪ
ಏಲಕ್ಕಿ ಪುಡಿ
ಮಾಡುವ ವಿಧಾನ:
ಮೊದಲಿಗೆ ಒಂದು ಪಾತ್ರೆಯಲ್ಲಿ ಬೆಲ್ಲ ಹಾಗೂ ನೀರು ಹಾಕಿ, ಪಾಕದ ಹದಕ್ಕೆ ಬರುವಂತೆ ಬಿಸಿಮಾಡಿಕೊಳ್ಳಿ. ಚೆನ್ನಾಗಿ ಪಾಕದ ಹದ ಬಂದ ತಕ್ಷಣ ಅದಕ್ಕೆ ದಪ್ಪ ರವೆ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಉಂಡೆ ಮಾಡಲು ಬರುವ ಹಾಗೆ ಗಟ್ಟಿಯಾಗುವ ತನಕ ಕಲಸಿಕೊಳ್ಳಿ. ನಂತರ ಒಲೆ ಆರಿಸಿ, ರವೆಯ ಮಿಶ್ರಣ ತಣ್ಣಗಾಗಲು ಬಿಡಿ. ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕಲಸಿ.
ಇನ್ನೊಂದು ಪಾತ್ರೆಯಲ್ಲಿ ಗೋಧಿ ಹಿಟ್ಟು ಮತ್ತು ಸ್ವಲ್ಪ ಉಪ್ಪು ಹಾಕಿ ಕಲಸಿಕೊಳ್ಳಿ. ಅದಕ್ಕೆ ನೀರು ಹಾಕಿ ಚಪಾತಿ ಹಿಟ್ಟಿನಂತೆ ಮೃದುವಾಗಿ ನಾದಿಕೊಳ್ಳಿ. ಕೊನೆಗೆ ಹಿಟ್ಟಿಗೆ ಎಣ್ಣೆ ಹಚ್ಚಿ, ಮೇಲೆ ಪಾತ್ರೆಯೊಂದನ್ನು ಮುಚ್ಚಿ ಕನಿಷ್ಠ 30 ನಿಮಿಷ ಬಿಡಿ.
ಈಗ ರವೆಯ ಮಿಶ್ರಣದಿಂದ ಚಿಕ್ಕ ಉಂಡೆ ಮಾಡಿ ಇಟ್ಟುಕೊಳ್ಳಿ. ಚಪಾತಿ ಹಿಟ್ಟನ್ನು ಚಿಕ್ಕದ್ದಾಗಿ ಲಟ್ಟಿಸಿಕೊಂಡು ಅದರ ಮಧ್ಯಕ್ಕೆ ರವೆ ಹೂರಣವನ್ನು ಇಟ್ಟುಕೊಂಡು ಸುತ್ತಲೂ ಹಿಟ್ಟಿನಿಂದ ಕವರ್ ಮಾಡಿಕೊಳ್ಳಿ. ಅದನ್ನು ಚಪಾತಿ ರೀತಿ ಲಟ್ಟಿಸಿಕೊಂಡು, ಎಣ್ಣೆ ಹಚ್ಚಿ ಬೇಯಿಸಿಕೊಂಡರೆ ಸಜ್ಜಕದ ಹೋಳಿಗೆ ತಯಾರಾಗುತ್ತದೆ.