ಸುಮಾರು 15ನೇ ಶತಮಾನದಲ್ಲಿ ವಿಜಯದಶಮಿಯನ್ನು ಆರಂಭಿಸಿದ್ದ ವಿಜಯನಗರ ಅರಸರು ತಮ್ಮ ರಾಜಧಾನಿ ಹಂಪೆಯಲ್ಲಿ ಮೆರವಣಿಗೆ ನಡೆಸುತ್ತಿದ್ದರು. ಈಗ ನಾವು ನೋಡುವ ಅಂಬಾರಿ (Mysuru Ambari) ಆಗಲೂ ಸಹ ಇತ್ತು. ಈ ಅಂಬಾರಿಯ ಮೂಲ ಮಹಾರಾಷ್ಟ್ರದ ದೇವಗಿರಿ ಎನ್ನಲಾಗುತ್ತದೆ.
ಶತ್ರುಗಳ ದಾಳಿಗೆ ನಲುಗಿದ್ದ ದೇವಗಿರಿ ನಾಶವಾಗುತ್ತದೆ. ಆಗ ಮುಮ್ಮಡಿ ಸಿಂಗನಾಯಕನೆಂಬ ದೊರೆ ಅದನ್ನು ಕೊಂಡೋಯ್ದು ಬಳ್ಳಾರಿಯ ರಾಮದುರ್ಗ ಕೋಟೆಯಲ್ಲಿ ಅಡಗಿಸಿಡುತ್ತಾನೆ. ಬಳಿಕ ಈತನ ಮಗನಾದ ಕಂಪಿಲರಾಯನು ಒಂದು ಸಾಮ್ರಾಜ್ಯವನ್ನು ನಿರ್ಮಿಸಿದ ನಂತರ ಅಂಬಾರಿಯನ್ನು ಹೊರ ತಂದು ಅದರಲ್ಲಿ ದುರ್ಗಾದೇವಿಯ ಮೂರ್ತಿಯನ್ನಿಟ್ಟು ಪೂಜಿಸಲು ಆರಂಭಿಸಿದ.
ಕಂಪಿಲರಾಯನ ಬಳಿಕ ಆತನ ಮಗನಾದ ಗಂಡುಗಲಿ ಕುಮಾರರಾಮ ಆ ಸಾಮ್ರಾಜ್ಯವನ್ನು ಆಳುತ್ತಿದ್ದ. ಸುಮಾರು 1327ರ ಹೊತ್ತಿಗೆ ದೆಹಲಿ ಸುಲ್ತಾನರ ದಾಳಿಯಿಂದಾಗಿ ಮರಣಹೊಂದಿದ ಕುಮಾರರಾಮನು ಕಂಪ್ಲಿ ರಾಜ್ಯದ ಕೊನೆಯ ರಾಜನಾಗಿದ್ದಾನೆ. ಆ ಸಮಯಕ್ಕಾಗಲೆ ವಿದ್ಯಾರಣ್ಯರ ಮಾರ್ಗದರ್ಶನದಲ್ಲಿ ವಿಜಯನಗರ ಸಾಮ್ರಾಜ್ಯ ನಿರ್ಮಾಣಕ್ಕೆ ತೊಡಗಿದ್ದ ಹಕ್ಕ-ಬುಕ್ಕರು ಈ ಅಂಬಾರಿಯನ್ನು ಸಂರಕ್ಷಿಸುತ್ತಾರೆ. ನಂತರದಲ್ಲಿ ಹಂಪಿಯನ್ನು ರಾಜಧಾನಿಯನ್ನಾಗಿಸಿದಾಗ ಅಲ್ಲಿಗೆ ಬುಕ್ಕ ಅರಸನು ಅಂಬಾರಿಯನ್ನು ತಂದು ಮಹಾನವಮಿಯಂದು ಮೆರವಣಿಗೆ ಆರಂಭಿಸಿದನು.
ಸುವರ್ಣಯುಗದ, ಎರಡನೇ ದೇವರಾಯನ ಕಾಲದಲ್ಲಿ ಬರ್ಮಾವನ್ನೂ ವಶಪಡಿಸಿಕೊಂಡು ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡ. ಶ್ರೀಕೃಷ್ಣದೇವರಾಯನಂತ ಶ್ರೇಷ್ಟ ಅರಸನಿದ್ದ ವಿಜಯನಗರ ಸಾಮ್ರಾಜ್ಯವು ಪತನಗೊಂಡ ಸಮಯಕ್ಕೆ ಅತ್ತ ಮೈಸೂರು ಸಂಸ್ಥಾನ ಶ್ರೀರಂಗಪಟ್ಟಣವನ್ನು ರಾಜಧಾನಿಯಾಗಿಸಿಕೊಂಡು ತಲೆ ಎತ್ತುತ್ತಿತ್ತು. ಆಗ ಅಂಬಾರಿಯನ್ನು ಕಾಪಾಡಲು ಮೊದಲು ಪೆನುಕೊಂಡಕ್ಕೆ ಸಾಗಿಸಲಾಯಿತು. ಈ ಮೂಲಕ ಅಂಬಾರಿಯನ್ನು ಕಾಪಾಡುವ ಹೊಣೆ ಶ್ರೀರಂಗಪಟ್ಟಣದ ಒಡೆಯರ ಹೆಗಲಿಗೆ ಬಂತು.
ಸುಮಾರು 800 ವರ್ಷಗಳ ಇತಿಹಾಸವುಳ್ಳ ಅಂಬಾರಿಯು ಕಳೆದ 409 ವರ್ಷಗಳಿಂದ ಮೈಸೂರು ಅರಸರ ಸುಪರ್ದಿಯಲ್ಲಿದೆ. ಈಗ ಕರ್ನಾಟಕ ಸರ್ಕಾರದ ರಕ್ಷಣೆಯಲ್ಲಿದ್ದು ನಾಡ ಹಬ್ಬ ದಸರಾ ದಿನ ರಾಜಬೀದಿಯಲ್ಲಿ ಮೆರವಣಿಗೆಯಲ್ಲಿ ಸಾಗುತ್ತದೆ.
ದಸರಾ ಹಬ್ಬದ ಕಡೆಯ ದಿನ ವಿಜಯದಶಮಿಯಂದು ಹೊರಡುವ ಜಂಬೂ ಸವಾರಿಯು ಅರಮನೆಯಲ್ಲಿ ಸಾಂಪ್ರದಾಯಿಕ ವಿಧಿವಿದಾನಗಳನ್ನು ಪೂರ್ಣಗೊಳಿಸಿ ಅರಮನೆಯ ಆವರಣದಿಂದ ಆನೆಯ ಮೇಲೆ ಮೆರವಣಿಗೆ ಹೊರಡುತ್ತದೆ. ಲಕ್ಷಾಂತರ ಭಕ್ತ ಸಮೂಹದ ಮಧ್ಯೆ ಸಾಗುವ ಅಂಬಾರಿಯ ಮೆರವಣಿಗೆ ಬನ್ನಿ ಮಂಟಪದ ವರೆಗೆ ಸಾಗಿ ಕೊನೆಗೊಳ್ಳುತ್ತದೆ.
ಅರಸರ ಕಾಲದಲ್ಲಿ ಅಂಬಾರಿಯಲ್ಲಿ ರಾಜರೇ ಕುಳಿತು ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಈಗ ರಾಜರ ಆಡಳಿತ ಕೊನೆಗೊಂಡ ಬಳಿಕ ಅದರಲ್ಲಿ ನಾಡದೇವಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ಇಟ್ಟು ಮೆರವಣಿಗೆ ಮಾಡಲಾಗುತ್ತದೆ.