– 4ನೇ ಬಾರಿ ಚಿನ್ನದ ಅಂಬಾರಿ ಹೊತ್ತ ಕ್ಯಾಪ್ಟನ್ ಅಭಿಮನ್ಯು
ಮೈಸೂರು: ರಾಜ್ಯದಲ್ಲಿ ಮಳೆ ಅಭಾವದಿಂದ ಬರದ ಛಾಯೆ ಆವರಿಸಿದೆ. ಹೀಗಾಗಿ ಈ ಬಾರಿ ಐತಿಹಾಸಿಕ ಮೈಸೂರು ದಸರಾವನ್ನು (Mysuru Dasara) ಅದ್ಧೂರಿಯಾಗಿ ಆಚರಿಸುವ ಬದಲು ಸಾಂಪ್ರದಾಯಿಕವಾಗಿ ಆಚರಿಸಲಾಯಿತು. ಬರದ ನಡುವೆಯೂ ಈ ಬಾರಿ ಲಕ್ಷಾಂತರ ಮಂದಿ ಭಾಗಿಯಾಗಿ ದಸರಾ ಜಂಬೂಸವಾರಿ (Dasara Jamboo Savari) ವೈಭವವನ್ನು ಕಣ್ತುಂಬಿಕೊಂಡಿದ್ದಾರೆ. ಲಕ್ಷಾಂತರ ಮಂದಿ ಸಾಕ್ಷಿಯಾಗಿ ದಸರಾ ಸಂಪನ್ನಗೊಂಡಿದೆ.
ಇಂದು (ಮಂಗಳವಾರ) ಮೈಸೂರಿನಲ್ಲಿ (Mysuru) ನಾಡಹಬ್ಬ ದಸರಾ ವೈಭವ ಕಳೆಗಟ್ಟಿತ್ತು. ದಸರಾ ಪ್ರಮುಖ ಆಕರ್ಷಣೆಯಾದ ದಸರಾ ಜಂಬೂಸವಾರಿಯನ್ನು ಬಿಸಿಲನ್ನೂ ಲೆಕ್ಕಿಸದೇ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಜನ ಕಣ್ತುಂಬಿಕೊಂಡು ಧನ್ಯತಾ ಭಾವ ಮೆರೆದರು. ಜನ ಬೆಳಗ್ಗೆಯಿಂದಲೇ ಅರಮನೆ ಮೈದಾನದಿಂದ ಹಿಡಿದು ಮೆರವಣಿಗೆ ಸಾಗುವ ಮಾರ್ಗದ ಉದ್ದಕ್ಕೂ ಬನ್ನಿಮಂಟಪದ ವರೆಗೆ ಕಿಕ್ಕಿರಿದು ಸೇರಿದ್ದರು. ಅರಮೆಯಲ್ಲಿ ಹಲವು ಕಾರ್ಯಕ್ರಮಗಳು ನಡೆದವು. ವಜ್ರಮುಷ್ಠ ಕಾಳಗ ಕೂಡ ನಡೆಯಿತು. ಇದನ್ನೂ ಓದಿ: ಮೈಸೂರು ದಸರಾ ಜಂಬೂಸವಾರಿಗೆ ಚಾಲನೆ – ಚಿನ್ನದ ಅಂಬಾರಿ ಹೊತ್ತು ರಾಜಗಾಂಭೀರ್ಯದಿಂದ ಸಾಗಿದ ಅಭಿಮನ್ಯು
ಮಧ್ಯಾಹ್ನದ ವೇಳೆ ಸಿಎಂ ಸಿದ್ದರಾಮಯ್ಯ ಅವರು ನಂದಿಧ್ವಜ ಪೂಜೆ ನೆರವೇರಿಸಿದರು. ನಂತರ ಸ್ತಬ್ಧಚಿತ್ರ ಹಾಗೂ ಕಲಾತಂಡಗಳ ಮೆರವಣಿಗೆಗೆ ಚಾಲನೆ ನೀಡಿದರು. ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಸಾಗಿದ ಚಿನ್ನದ ಅಂಬಾರಿ ಮೆರವಣಿಗೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ಈ ಬಾರಿ ಪೊಲೀಸ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಸಮನ್ವಯದ ಕೊರತೆಯಿಂದ ನಿಗದಿಗಿಂತ 15 ನಿಮಿಷ ತಡವಾಗಿ ಮೆರವಣಿಗೆಗೆ ಚಾಲನೆ ದೊರೆಯಿತು. ಈ ವೇಳೆ ಸಿಎಂಗೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ, ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ, ಮೇಯರ್ ಶಿವಕುಮಾರ್ ಸಾಥ್ ನೀಡಿದರು.
ದಸರಾ ಜಂಬೂಸವಾರಿಗೆ ಸ್ತಬ್ಧಚಿತ್ರ ಹಾಗೂ ವಿವಿಧ ಕಲಾತಂಡಗಳು ಮೆರುಗು ನೀಡಿದವು. ರಾಜ್ಯದ ವಿವಿಧ ಜಿಲ್ಲೆಗಳ 31 ಹಾಗೂ ವಿವಿಧ ಇಲಾಖೆಗಳ 18 ಸೇರಿದಂತೆ ಒಟ್ಟು 49 ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿವೆ. ಇಸ್ರೋ ಯಶಸ್ವಿ ಚಂದ್ರಯಾನ-3 ಯೋಜನೆಗೆ ಸಂಬಂಧಿಸಿದ ಸ್ತಬ್ಧಚಿತ್ರ ಗಮನ ಸೆಳೆಯಿತು. ಅಲ್ಲದೇ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತ ಸ್ತಬ್ಧಚಿತ್ರ ಮೆರವಣಿಗೆಯ ವಿಶೇಷ ಆಕರ್ಷಣೆಯಾಗಿತ್ತು. ಜೊತೆಗೆ ಡೊಳ್ಳು ಕುಣಿತ, ವೀರಗಾಸೆ, ಪಟ ಕುಣಿತ ಹೀಗೆ ಅನೇಕ ಜನಪದ ಕಲಾತಂಡಗಳು ಮೆರವಣಿಗೆ ಉದ್ದಕ್ಕೂ ಸಾಗಿ ಜನರನ್ನು ರಂಜಿಸಿದವು. ಇದನ್ನೂ ಓದಿ: ದಸರಾ ಜಂಬೂ ಸವಾರಿಗೆ ಮೆರಗು ನೀಡಲಿವೆ 49 ವಿಶೇಷ ಸ್ತಬ್ಧ ಚಿತ್ರಗಳು – ಯಾವ್ಯಾವ ಜಿಲ್ಲೆಯಿಂದ ಏನೇನು?
ಕ್ಯಾಪ್ಟನ್ ಅಭಿಮನ್ಯು ಆನೆ ಚಿನ್ನದ ಅಂಬಾರಿ ಹೊತ್ತು ಸಾಗಿದ್ದು ಇದು ನಾಲ್ಕನೇ ಬಾರಿ. ಸಂಜೆ 5:23 ಕ್ಕೆ ಅರಮನೆ ಬಿಟ್ಟಿದ್ದ ಅಭಿಮನ್ಯು. ರಾತ್ರಿ 7:25 ರ ಹೊತ್ತಿಗೆ ಬನ್ನಿಮಂಟಪ ತಲುಪಿದ. ಮೆರವಣಿಗೆಯಿಂದ ಅರಮನೆಯಿಂದ ಹೊರಟು, ಚಾಮರಾಜ ವೃತ್ತ, ಕೃಷ್ಣರಾಜ ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದ ಕಾಲೇಜು ವೃತ್ತ. ನ್ಯೂ ಸಯ್ಯಾಜಿರಾವ್ ರಸ್ತೆ, ಹೈವೆ ವೃತ್ತದ ಮೂಲಕ ಐದು ಕಿ.ಮೀ. ದೂರದ ಬನ್ನಿಮಂಟಪವನ್ನು ತಲುಪಿತು.
ಮೆರವಣಿಗೆ ಹಾದಿಯುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನರು, ಚಿನ್ನದ ಅಂಬಾರಿಯ ಮೇಲೆ ವಿರಾಜಮಾನವಾಗಿ ದರ್ಶನ ನೀಡಿದ ತಾಯಿಯನ್ನು ಕಂಡು ಕೈಮುಗಿದು ಭಕ್ತಿ-ಭಾವ ಪ್ರದರ್ಶಿಸಿದರು. ‘ಜೈ ಚಾಮುಂಡಿ’ ಎಂದು ಕೂಗಿದರು. ಅನೇಕರು ತಮ್ಮ ಮೊಬೈಲ್‌ಗಳಲ್ಲಿ ಜಂಬೂಸವಾರಿ ಮೆರವಣಿಗೆ ದೃಶ್ಯವನ್ನು ಸೆರೆ ಹಿಡಿದರು. ಜಂಬೂಸವಾರಿ ಮುಂದೆ ಸಾಗುತ್ತಿದ್ದ ಸ್ತಬ್ಧಚಿತ್ರಗಳು ಹಾಗೂ ಕಲಾತಂಡಗಳ ವೈಶಿಷ್ಟ್ಯವನ್ನು ಕಣ್ತುಂಬಿಕೊಂಡರು. ಇದನ್ನೂ ಓದಿ: ಐತಿಹಾಸಿಕ ಮೈಸೂರು ದಸರಾ ಮಹೋತ್ಸವ- ಜಂಬೂಸವಾರಿ ಕಣ್ತುಂಬಿಕೊಳ್ಳಲು ಕಾತುರ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]