ದಾಸ ಪುರಂದರ ಶ್ರೀನಿವಾಸರ ಬಗ್ಗೆ ನಿಮಗೆಲ್ಲ ತಿಳಿದಿರುತ್ತೆ. ಇತ್ತೀಚೆಗೆ ಕಲರ್ಸ್ ಕನ್ನಡ ಸಂಸ್ಥೆ ಕೂಡ ನವಕೋಟಿ ನಾರಾಯಣ ದಾಸರಾದ ಕತೆಯನ್ನ `ದಾಸ ಪುರಂದರ’ ಧಾರವಾಹಿ ಮೂಲಕ ಇಡೀ ಕರುನಾಡಿಗೆ ತಿಳಿಸುವ ಪ್ರಯತ್ನ ಮಾಡಿತ್ತು. ಈ ಧಾರಾವಾಹಿ ಮೂಲಕ ಕರ್ನಾಟಕದ ತುಂಬೆಲ್ಲಾ ಮೆರವಣಿಗೆ ಹೊರಡುವ ಅವಕಾಶ ರಂಗಭೂಮಿಯ ಅಪ್ಪಟ ಪ್ರತಿಭೆ ದೀಪಕ್ ಸುಬ್ರಹ್ಮಣ್ಯಗೆ (Deepak Subrahmanya) ಸಿಕ್ಕಿತ್ತು. ಶ್ರೀನಿವಾಸನ ಅವತಾರವೆತ್ತಿ ಕನ್ನಡಿಗರಿಂದ ಬಹುಪರಾಕ್ ಹಾಕಿಸಿಕೊಂಡ ದೀಪಕ್ ಈಗ ಅಂಬುಜಗೋಸ್ಕರ ಕ್ರೈಮ್ ರಿಪೋರ್ಟರ್ ಆಗಿದ್ದಾರೆ. ಹಿಂದೆಂದೂ ಕಂಡು ಕೇಳರಿಯರ ವಿಚಿತ್ರ ಕಥಾಹಂದರವನ್ನ ಬಿಚ್ಚಿಟ್ಟು ಕನ್ನಡ ಕಲಾಭಿಮಾನಿಗಳನ್ನು ಬೆಚ್ಚಿಬೀಳಿಸಬೇಕು ಅಂತ ಹೊರಟಿರೋ ಅಂಬುಜಾಗೆ ಅರ್ಜುನ್ ಅಲಿಯಾಸ್ ದೀಪಕ್ ಸುಬ್ರಹ್ಮಣ್ಯ ಸಾಥ್ ಕೊಟ್ಟಿದ್ದಾರೆ.
ಅಂಬುಜ (Ambuja) ಒಂದು ನೈಜ ಘಟನೆಯಾಧಾರಿತ ಚಿತ್ರ. ಇಲ್ಲಿ ಭೀಕರ ಮತ್ತು ರಣಭಯಂಕರ ಮರ್ಡರ್ ಮಿಸ್ಟ್ರಿಯಿದೆ. ಹಾರರ್-ಥ್ರಿಲ್ಲರ್ ಎಲಿಮೆಂಟ್ಸ್‍ಗಳಿದೆ. ಕಾಶೀನಾಥ್ ಡಿ ಮಡಿವಾಳರ್ (Kashinath Madiwalar) ಎಂಬುವವರು ಆ ಜಾಗದಲ್ಲಿ ಹುದುಗಿದ್ದ ಸಾವಿನ ಸತ್ಯವನ್ನ ಹೊರತೆಗೆದಿದ್ದಾರೆ. ಅನ್‍ಟೋಲ್ಡ್ ಕ್ರೈಮ್ ಸ್ಟೋರಿಯನ್ನ ನಿರ್ದೇಶಕ ಶ್ರೀನಿ ಹನುಮಂತರಾಜು ಅವರು ರಿವರ್ಸ್ ಸ್ಕ್ರೀನ್ ಪ್ಲೇ ಮೂಲಕ ತೆರೆಮೇಲೆ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಟೀಸರ್, ಟ್ರೈಲರ್ ನೋಡಿದರೆ ಇದೊಂದು ಯೂನಿಕ್ ಕ್ರೈಮ್ ಸ್ಟೋರಿ ಎಂಬುದು ತಿಳಿಯುತ್ತೆ. ಅಂಬುಜ ಚಿತ್ರದ ಮೇಲೆ ಹೊಸದೊಂದು ಭರವಸೆ ಮೂಡುತ್ತೆ, ಪಾತ್ರವರ್ಗ ಗಮನ ಸೆಳೆಯುತ್ತೆ.
ಹೌದು, ಅಂಬುಜ ಚಿತ್ರದಲ್ಲಿ ಲಂಬಾಣಿ ವೇಷಭೂಷಣದಲ್ಲಿರುವ ರಜನಿ ಹಾಗೂ ಬೇಬಿ ಆಕಾಂಕ್ಷ ಚಿತ್ರಪ್ರೇಮಿಗಳನ್ನ ಚಿಂತನೆಯ ಓರೆಗೆ ಹಚ್ಚಿದ್ದಾರೆ. ಮಾದಕ ಮದನಾರಿಯಾಗಿ ಕಾಡ್ತಿದ್ದ ಶುಭಪುಂಜಾ ಏಕಾಏಕಿ ಚೂರಿ ಕೈಗೆತ್ತಿಕೊಂಡಿರುವುದನ್ನ ನೋಡಿ ಪ್ರೇಕ್ಷಕರು ಬೆಚ್ಚಿಬಿದ್ದಿದ್ದಾರೆ. ಕಾಮಿಡಿ ಖಿಲಾಡಿಗಳು ಜಿಜಿ ಶುಭ ಕೇರ್ ಟೇಕರ್ ಅನ್ನೋ ಕಾರಣಕ್ಕೂ ಕುತೂಹಲ ಹೆಚ್ಚಿದೆ. ಪದ್ಮಜ ರಾವ್, ಶರಣಯ್ಯ, ಜಗದೀಶ್ ಹಲ್ಕುಡೆ, ನಿಶಾ ಹೆಗ್ಡೆ, ಗುರುದೇವ ನಾಗರಾಜ್, ಸಂದೇಶ್ ಶೆಟ್ಟಿ ಅಜ್ರಿ ತಾರಾಗಣದಲ್ಲಿದ್ದಾರೆ. ಅಪರಾಧ ವಿಭಾಗದ ವರದಿಗಾರನಾಗಿ ಮುಖ್ಯಭೂಮಿಕೆಯಲ್ಲಿರುವ ದೀಪಕ್ ಸುಬ್ರಹ್ಮಣ್ಯ, ಅಂಬುಜ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡುವಾಗೆಲ್ಲಾ ನಾನು ಅದನ್ನು ಥ್ರಿಲ್ಲಿಂಗ್ ಪಾಯಿಂಟ್‍ಗೆ ತಂದು ನಿಲ್ಲಿಸ್ತೇನೆ ಅಂತೇಳುವ ಮೂಲಕ ನಿರೀಕ್ಷೆ ಹೆಚ್ಚಿಸಿದ್ದಾರೆ. ಇದನ್ನೂ ಓದಿ:‘ಲೈಗರ್’ ನಟಿ ಜೊತೆ ಆದಿತ್ಯ ಕಪೂರ್ ಕಣ್ ಕಣ್ ಸಲಿಗೆ
ಅಂದ್ಹಾಗೇ, ದೀಪಕ್ ಇಲ್ಲಿತನಕ ಮಾಡಿರುವುದು ಏಳೇ ಸಿನಿಮಾ. ಆದರೆ, ಪ್ರತಿ ಪಾತ್ರವೂ ವಿಭಿನ್ನ ಮತ್ತು ವಿಶಿಷ್ಟ. ನೀವು ಶುದ್ದಿ ಸಿನಿಮಾದಿಂದ ಈಗೀನ ಅಂಬುಜ ಚಿತ್ರವರೆಗೆ ದೀಪಕ್ ಪಾತ್ರಗಳನ್ನ ಗಮನಿಸಿದರೆ ಗೊತ್ತಾಗುತ್ತೆ ಸಿನಿಮಾದಿಂದ ಸಿನಿಮಾಗೆ ಎಷ್ಟು ಪ್ರಯೋಗ ಮಾಡಿದ್ದಾರೆ ಅಂತ. ಸದಾ ಚಾಲೆಂಜಿಂಗ್ ಕ್ಯಾರೆಕ್ಟರ್ ಗಳನ್ನೇ ಆಯ್ಕೆಮಾಡಿಕೊಳ್ಳುವ ದೀಪಕ್, ತಮಗೆ ಸಿಕ್ಕಂತಹ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡ್ತಾರೆ. ಪಾತ್ರಕ್ಕಾಗಿ ಗುರುತೇ ಸಿಗದಷ್ಟು ಬದಲಾಗ್ತಾರೆ. ಅದು ಸೀರಿಯಲ್ ಆದ್ರೂ ಸರೀ ಸಿನಿಮಾ ಆದ್ರೂ ಸರೀ. ತಮ್ಮನ್ನ ಅರಸಿಕೊಂಡು ಬಂದ ಪಾತ್ರಕ್ಕೆ ನೂರಕ್ಕೆ ನೂರಷ್ಟು ನ್ಯಾಯ ಒದಗಿಸಲು ಶ್ರಮಿಸ್ತಾರೆ. ನಟನೆಗೆ ಪಾತ್ರ ಸೀಮಿತವಾಗದೇ ಬರಹಗಾರನಾಗಿ, ಕಿರುಚಿತ್ರ ನಿರ್ದೇಶಕನಾಗಿ ತಮ್ಮನ್ನ ತಾವು ತೊಡಗಿಸಿಕೊಳ್ತಿದ್ದಾರೆ. ಸಿನಿಮಾ, ಸೀರಿಯಲ್ ಜೊತೆಗೆ ರಂಗಭೂಮಿಯಲ್ಲೂ ದೀಪಕ್ ಸಕ್ರಿಯರಾಗಿದ್ದಾರೆ.
ಸದ್ಯ ಅಂಬುಜ ಚಿತ್ರದಲ್ಲಿ ಲವ್ವರ್ ಬಾಯ್ ಹಾಗೂ ಕ್ರೈಮ್ ರಿಪೋರ್ಟರ್ ಎರಡು ಪಾತ್ರಗಳನ್ನೂ ಪೋಷಿಸಿದ್ದಾರೆ. ರಿಯಲ್ ಇನ್ಸಿಡೆಂಟ್ ಬೇಸ್ಡ್ ಸಿನಿಮಾ ಇದಾಗಿರುವ ಕಾರಣಕ್ಕೆ ಕ್ರೈಮ್ ರಿಪೋರ್ಟಿಂಗ್ ಕುರಿತು ಅಧ್ಯಯನ ಮಾಡಿಯೇ ಪಾತ್ರಕ್ಕೆ ಬಣ್ಣ ಹಚ್ಚಿರುವುದಾಗಿ ಹೇಳಿಕೊಂಡಿದ್ದಾರೆ. ಶುದ್ದಿ, ಅಯನ, ದಿನಚರಿ, ಪಿಂಕಿ ಎಲ್ಲಿ ಸಿನಿಮಾಗಳಲ್ಲಿ ದೀಪಕ್ ಮಿಂಚಿದ್ದಾರೆ. ಲೈಫೋ ಲೈಫೋ, ಸಾರಾಂಶ, ಮಿಸ್ಟರ್ ರಾಣಿ, ಅಂಬುಜ ಚಿತ್ರಗಳ ಬಿಡುಗಡೆಗಾಗಿ ಕಾಯ್ತಿದ್ದಾರೆ. ಇದೇ ಜುಲೈ 21ರಂದು ಅಂಬುಜ ಚಿತ್ರ ಬಿಡುಗಡೆಗೆ ಮುಹೂರ್ತ ಫಿಕ್ಸಾಗಿದೆ. ಕಾಶಿನಾಥ್, ಲೋಕೇಶ್ ಭೈರವ, ಶಿವಪ್ರಕಾಶ್.ಎನ್ ಸಹಯೋಗದಲ್ಲಿ ಅಂಬುಜ ಅದ್ದೂರಿಯಾಗಿ ಮೂಡಿಬಂದಿದೆ. ವಿಜಯ್ ಎಂ ಕುಮಾರ್ ಸಂಕಲನ, ಮುರುಳೀಧರ್ ಎಂ. ಛಾಯಾಗ್ರಹಣ ಚಿತ್ರಕ್ಕಿದ್ದು, ಪ್ರಸನ್ನ ಕುಮಾರ್ ಮ್ಯೂಸಿಕ್ ಮಾಡಿದ್ದಾರೆ. ತ್ಯಾಗರಾಜ್ ಅವ್ರು ಹಿನ್ನಲೆ ಸಂಗೀತ ಒದಗಿಸಿದ್ದಾರೆ. ಲೈಟಿಂಗ್ ಅಂಡ್ ಕಲರ್ ಗ್ರೇಡಿಂಗ್‍ನಲ್ಲಿ ಪ್ರಯೋಗ ಮಾಡಿದ್ದು, ಅಂಬುಜ ಚಿತ್ರ ತೆರೆಮೇಲೆ ವಿಭಿನ್ನವಾಗಿ ಕಾಣಲಿದೆ. ಮಾರ್ಸ್ ಸುರೇಶ್ ಅವ್ರು ರಾಜಾದ್ಯಂತ ವಿತರಣೆಯ ಜವಾಬ್ದಾರಿ ಹೊತ್ತಿದ್ದಾರೆ. ಗ್ರ್ಯಾಂಡ್ ಆಗಿಯೇ ರಿಲೀಸ್ ಮಾಡೋದಕ್ಕೆ ಮುಂದಾಗಿದ್ದಾರೆ.
Web Stories