ನಿನ್ನೆ ಮಧ್ಯೆರಾತ್ರಿಯಿಂದಲೇ ದರ್ಶನ್ (Darshan) ಅವರ ಹುಟ್ಟುಹಬ್ಬವನ್ನು (Birthday) ಅವರ ಅಭಿಮಾನಿಗಳು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಬೆಂಗಳೂರಿನ ಆರ್.ಆರ್ ನಗರದಲ್ಲಿರುವ ದರ್ಶನ್ ನಿವಾಸದ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದು, ನೆಚ್ಚಿನ ನಟನಿಗೆ ಶುಭಾಶಯ ಕೋರಿದ್ದಾರೆ.
ದರ್ಶನ್ ಮನೆ ಸುತ್ತ ಸುಮಾರು 2 ಕಿಮೀ ಹಿಂದಿನಿಂದ ಅಭಿಮಾನಿಗಳ ಸಾಲುಗಟ್ಟಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ದರ್ಶನ್ ಅಭಿಮಾನಿಗಳು ಆಗಮಿಸಿದ್ದಾರೆ. ರಾತ್ರಿಯಿಂದಲೇ ಅಭಿಮಾನಿಗಳ ಜೊತೆ ದರ್ಶನ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಬೆಳಗ್ಗೆ ಸ್ವಲ್ಪ ಸಮಯ ವಿಶ್ರಾಂತಿ ಪಡೆದುಕೊಂಡು ಮತ್ತೆ 9.30 ರ ಬಳಿಕ ತಮ್ಮ ಸೆಲೆಬ್ರಿಟಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.
ಕೇವಲ ಅಭಿಮಾನಿಗಳು ಮಾತ್ರವಲ್ಲ, ಕನ್ನಡ ಚಿತ್ರೋದ್ಯಮ ಅನೇಕ ಗಣ್ಯರು ಕೂಡ ದರ್ಶನ್ ಮನೆಗೆ ಆಗಮಿಸಿ ಶುಭಾಶಯ ಕೋರಿದ್ದಾರೆ. ಕಾಟೇರಾ ನಿರ್ದೇಶಕ ತರುಣ್ ಸುಧೀರ್, ನಟರಾದ ಪ್ರಜ್ವಲ್, ಚಿಕ್ಕಣ್ಣ, ವಿನೋದ್ ಪ್ರಭಾಕರ್, ಧನ್ವೀರ್, ಝನೈದ್ ಖಾನ್, ಅಭಿಷೇಕ್ ಅಂಬರೀಶ್ ಸೇರಿದಂತೆ ಅನೇಕ ತಾರೆಯರು ದರ್ಶನ್ ಬರ್ತಡೇ ಸಂಭ್ರಮಕ್ಕೆ ಶುಭ ಹಾರೈಸಲು ಆಗಮಿಸಿದ್ದರು.
ಡಿಬಾಸ್ ಹುಟ್ಟುಹಬ್ಬಕ್ಕಾಗಿ ಪ್ರತಿ ವರ್ಷ ಅಪಾರ ಅಭಿಮಾನಿಗಳು ಅವರ ಮನೆಯ ಬಳಿ ಬರುತ್ತಾರೆ. ತಮ್ಮ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಕೋರಲು ರಾಜ್ಯದ ವಿವಿಧೆಡೆಯಿಂದ ಅಭಿಮಾನಿಗಳು ಆಗಮಿಸಲಿದ್ದಾರೆ. ಹಾಗಾಗಿ ಆರ್‌ಆರ್ ನಗರ ದರ್ಶನ ನಿವಾಸದ ಬಳಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.