ದರ್ಶನ್‌ಗೆ ಹೆಣ್ಣು-ಹೆಂಡದ ನಶೆ ಹೆಚ್ಚಾಗಿತ್ತು, ಸಂಸ್ಕಾರ ಇರಲಿಲ್ಲ: ಮೊದಲ ಗುರು ಅಡ್ಡಂಡ ಕಾರ್ಯಪ್ಪ

Public TV
2 Min Read
Addanda C Cariappa

– ಪವಿತ್ರಾಗೌಡ ದರ್ಶನ್ ಪಾಲಿನ ಶನಿ

ಮೈಸೂರು: ಹೆಣ್ಣು ಮತ್ತು ಹೆಂಡದ ನಶೆ ದರ್ಶನ್‌ಗೆ (Darshan) ಈ ಸ್ಥಿತಿ ತಂದಿಟ್ಟಿದೆ ಎಂದು ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಕುರಿತು ನಟ ದರ್ಶನ್ ಅವರ ಮೊದಲ ಗುರು ಅಡ್ಡಂಡ ಕಾರ್ಯಪ್ಪ (Addanda Cariappa) ಹೇಳಿದ್ದಾರೆ.

ಮೈಸೂರಿನಲ್ಲಿ (Mysuru) ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ದರ್ಶನ್‌ಗೆ ಸಂಸ್ಕಾರ ಇಲ್ಲದ ಕಾರಣ ಆತನಿಗೆ ಈ ಪರಿಸ್ಥಿತಿ ಬಂದಿದೆ. ಪವಿತ್ರಾಗೌಡ ಆತನ ಪಾಲಿಗೆ ಶನಿ ಆಗಿದ್ದಾಳೆ. ಯಶಸ್ಸು ಎಂಬುದು ದರ್ಶನ್ ಒಳಗೆ ಅಹಂ ಬೆಳೆಸಿತು. ಸಿನಿಮಾದಲ್ಲಿ ಮಾಡುವ ಪಾತ್ರವನ್ನು ನಿಜ ಜೀವನದಲ್ಲಿ ಮಾಡೋಕೆ ಹೋಗಿ ಈಗ ಜೈಲು ಸೇರಿದ್ದಾನೆ ಎಂದರು. ಇದನ್ನೂ ಓದಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹೆಚ್‌ಡಿಕೆ

ಆತ ನನ್ನ ಶಿಷ್ಯ. ನಾನು ಅವನ ಮೊದಲ ಗುರು. 1987ರಲ್ಲಿ ನಾನು ಆಗ ತಾನೇ ನೀನಾಸಂ ಮುಗಿಸಿ ಬಂದಿದ್ದೆ. ನಾವು ಪ್ರತಿ ವರ್ಷ ಹುಟ್ಟೂರು ಪೊನ್ನಂಪೇಟೆಯಲ್ಲಿ ಮಕ್ಕಳ ಶಿಬಿರವನ್ನು ಮಾಡುತ್ತಿದ್ದೆವು. ದರ್ಶನ್ ಅವರ ಅಜ್ಜಿ ಮನೆ ಕೂಡ ಪೊನ್ನಂಪೇಟೆ. ಅಲ್ಲಿಗೆ ದರ್ಶನ್ ಬೇಸಿಗೆ ರಜೆ ಕಳೆಯಲು ಬರುತ್ತಿದ್ದ. ಅದೇ ಸಮಯಕ್ಕೆ ನಮ್ಮ ಶಿಬಿರ ನಡೆಯುತ್ತಿತ್ತು. ನಾಟಕದಲ್ಲಿ ಸೇರಿಕೋ ಎಂದು ದರ್ಶನ್‌ಗೆ ಹೇಳಿದ್ದೆ. ದರ್ಶನ್ ಆಗ 7ನೇ ತರಗತಿಯಲ್ಲಿದ್ದ. 7ನೇ ತರಗತಿಗೆ 10ನೇ ತರಗತಿಯವರ ರೀತಿ ಕಾಣುತ್ತಿದ್ದ. ನಮ್ಮ ನಾಟಕದಲ್ಲಿ ದರ್ಶನ್‌ಗೆ ರಾಜನ ಪಾತ್ರ ಕೊಟ್ಟಿದ್ದೆ. ತುಂಬಾ ಚೆನ್ನಾಗಿ ಅಭಿನಯಿಸಿದ್ದ. ನನ್ನ ಹೆಂಡತಿಯೇ ದರ್ಶನ್‌ಗೆ ಬಣ್ಣ ಹಚ್ಚಿದ್ದಳು. ಇದಾದ ಬಳಿಕ ಇವರ ಮೊದಲ ಸಿನಿಮಾ ನನಗೆ ಇಷ್ಟವಾಗಲಿಲ್ಲ. ಮತ್ತೊಮ್ಮೆ ಭೇಟಿಯಾದ ಸಂದರ್ಭ ನೀನಾಸಂಗೆ ಹೋಗುವಂತೆ ಪತ್ರ ಕೊಟ್ಟೆ. ಕಲಾವಿದನಾಗಿರುವ ನಾನು ಬೇರೊಬ್ಬ ಕಲಾವಿದನನ್ನು ಬೆಳೆಸುವುದು ನನ್ನ ಜವಾಬ್ದಾರಿ. ಮಂಡ್ಯ ರಮೇಶ್ ಕೂಡ ಒಂದು ಪತ್ರ ಕೊಟ್ಟರು. ಇದಾದ ಬಳಿಕ ದರ್ಶನ್ ಹೆಗ್ಗೋಡುನಲ್ಲಿರುವ ನೀನಾಸಂನಲ್ಲಿ ತರಬೇತಿ ಪಡೆದುಕೊಂಡ ಎಂದು ಹೇಳಿದರು. ಇದನ್ನೂ ಓದಿ: ಪ್ರಚೋದನೆ ಮಾಡಿ ಈ ಸ್ಥಿತಿಗೆ ತಂದಿದ್ದಾರೆ, ಒಳ್ಳೆತನ ಅವರನ್ನು ಕಾಪಾಡುತ್ತೆ: ದರ್ಶನ್ ಬಾವ ಮಂಜುನಾಥ್

ಈಗ ಅವನ ಸ್ಥಿತಿ ಕಂಡು ನನಗೆ ಬೇಸರವಿದೆ. ಅವನ ಫ್ಯಾನ್ಸ್‌ಗಳು ಅವರಿವರನ್ನು ಟ್ರೋಲ್ ಮಾಡುವುದು ಬಿಟ್ಟು ಕೊಲೆಯಾದ ವ್ಯಕ್ತಿಯ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಲಿ ಎಂದು ಹೇಳಿದರು. ಇದನ್ನೂ ಓದಿ: ತಿರುಪತಿಗೆ ತೆರಳಿ ದೇವರ ದರ್ಶನ ಪಡೆದ ಹೆಚ್‌ಡಿಕೆ

Share This Article