ಬೆಂಗಳೂರು: ಮೈಸೂರಲ್ಲಿ ಅಪಘಾತಗೊಂಡು ಬಳಿಕ ನಾಪತ್ತೆಯಾಗಿದ್ದ ನಟ ದರ್ಶನ್ ಸಂಚರಿಸುತ್ತಿದ್ದ ಕಾರು ಶ್ರೀರಂಗಪಟ್ಟಣದ ಸ್ನೇಹಿತನ ತೋಟದ ಮನೆಯಲ್ಲಿ ಪತ್ತೆಯಾಗಿದೆ.
ಮೈಸೂರಿನಲ್ಲಿ ನಡೆದ ಅಪಘಾತದ ಬಳಿಕ ಆಡಿ ಕ್ಯೂ7 ಕಾರನ್ನು ಸದ್ಯ ಶ್ರೀರಂಗಪಟ್ಟಣದ ತೋಟದ ಮನೆಗೆ ತೆಗೆದುಕೊಂಡು ಹೋಗಿದ್ದು ಯಾರು ಹಾಗೂ ಏಕೆ? ಯಾರಿಗೂ ತಿಳಿಯದಂತೆ ತೆಗೆದುಕೊಂಡು ಹೋಗಿದ್ದು ಏಕೆ ಎನ್ನುವ ಪ್ರಶ್ನೆ ಎದ್ದಿದೆ. ಅಷ್ಟೇ ಅಲ್ಲದೇ ಅಪಘಾತವಾದ ಬಳಿಕ ಪ್ರಕರಣವನ್ನು ಮುಚ್ಚಿ ಹಾಕಲು ಪೊಲೀಸರೇ ಸಹಕರಿಸಿದ್ರಾ ಎನ್ನುವ ಪ್ರಶ್ನೆಯೂ ಎದ್ದಿದೆ. ಇನ್ನು ಅಚ್ಚರಿ ಎಂಬಂತೆ ಸದ್ಯ ಪತ್ತೆಯಾಗಿರುವ ಕಾರಿನ ನೋಂದಣಿ ಫಲಕ ಕೂಡ ನಾಪತ್ತೆಯಾಗಿದೆ.
Advertisement
Advertisement
ಅಪಘಾತ ನಡೆದ ಬಳಿಕ ಕಾರು ನಾಪತ್ತೆಯಾಗಿತ್ತು. ಸದ್ಯ ಪತ್ತೆಯಾಗಿರುವ ಕಾರು ಸಂಪೂರ್ಣವಾಗಿ ಹಾಳಾಗಿದ್ದು, ಕಾರಿನ ಒಳಭಾಗದಲ್ಲಿ ರಕ್ತದ ಕಲೆಗಳು ಕೂಡ ಪತ್ತೆಯಾಗಿದೆ. ಕಾರು ನಾಪತ್ತೆ ಆಗಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗುತ್ತಿದಂತೆ ಎಚ್ಚೆತ್ತ ಮೈಸೂರು ನಗರದ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ ರಾವ್ ಅವರು ಕಾರನ್ನು ಠಾಣೆಗೆ ಹಾಜರು ಪಡಿಸುವಂತೆ ಸೂಚಿಸಿದ್ದಾರೆ. ಇದಾದ ಬಳಿಕ ಕಾರನ್ನು ಮೈಸೂರಿನ ವಿವಿಪುರಂ ಪೊಲೀಸ್ ಠಾಣೆಯ ಎದುರು ತಂದು ನಿಲ್ಲಿಸಲಾಗಿದೆ.
Advertisement
ಅಪಘಾತವಾದ ಬಳಿಕ ಕಾರನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಹಾಜರು ಪಡಿಸದೇ ಬೇರೆಡೆ ತೆಗೆದುಕೊಂಡು ಹೋಗಲು ಅನುಮತಿ ಕೊಟ್ಟಿದ್ದು ಹೇಗೆ ಎಂಬ ಪ್ರಶ್ನೆ ಮೂಡಿದೆ. ಅಲ್ಲದೇ ಅಪಘಾತ ನಡೆದ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು, ಅಪಘಾತವಾದ ಕಾರಿನಿಂದ ಕೆಲ ಬ್ಯಾಗ್‍ಗಳನ್ನು ದರ್ಶನ್ ಸ್ನೇಹಿತರು ಬೇರೆಂದು ಕಾರಿಗೆ ತುಂಬಿ ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಪೊಲೀಸರು ಕೂಡ ಸ್ಥಳದಲ್ಲಿ ಇದ್ದರು. ಬಳಿಕವೇ ಕಾರನ್ನು ತೆಗೆದುಕೊಂಡು ಹೋಗಲಾಯಿತು ಎಂದು ಮಾಹಿತಿ ನೀಡಿದ್ದಾರೆ.
Advertisement
ಉಳಿದಂತೆ ಭಾನುವಾರ ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿದ್ದ ದರ್ಶನ್ ಅವರು ಆಗಮಿಸಿದ್ದ ಕಾರು ಹಾಗೂ ಇಂದು ತೆರಳುತ್ತಿದ್ದ ಕಾರು ಒಂದೇ ಆಗಿದ್ದರೂ ನಂಬರ್ ಪ್ಲೇಟ್ ಮಿಸ್ ಆಗಿದ್ದು ಹೇಗೆ ಎಂಬುದು ಕುತೂಹಲ ಮೂಡಿಸಿದೆ. ಉಳಿದಂತೆ ಘಟನೆ ಸಂಬಂಧ 14 ಗಂಟೆಗಳ ಬಳಿಕ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೈಸೂರಿನ ಭೇಟಿ ವೇಳೆ ಆಡಿ ಕ್ಯೂ7 ಕಾರನ್ನು ದರ್ಶನ್ ಬಳಸಿದ್ದರು. ಕಾರಿನ ಸಂಖ್ಯೆ ಕೆಎ-51 ಝೆಡ್-7999 ಆಗಿದ್ದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಆರ್‍ಟಿಓ ಕಚೇರಿಯಲ್ಲಿ 2009 ಮೇ 29 ರಂದು ಶಾಸಕ ಸಂದೇಶ ನಾಗರಾಜ್ ಅವರ ಮಾಲೀಕತ್ವದಲ್ಲಿ ನೋಂದಣಿಯಾಗಿದೆ.
ಈ ಕುರಿತು ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ ರಾವ್ ಅವರು, ಅಪಘಾತದ ಬಳಿಕ ವಾಹನ ಬೆಂಗಳೂರಿಗೆ ಏಕೆ ರವಾನೆ ಮಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ಸದ್ಯ ವಾಪಸ್ ವಾಹನ ತರಿಸುವಂತೆ ಸೂಚನೆ ನೀಡಿದ್ದೇವೆ. ವಾಹನ ಯಾರು ಚಾಲನೆ ಮಾಡುತ್ತಿದ್ದರು ಎನ್ನುವುದರ ಬಗ್ಗೆಯೂ ಮಾಹಿತಿ ಇಲ್ಲ. ಘಟನೆ ಕುರಿತು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದೇವೆ. ರಾಯ್ ಎಂಬ ವ್ಯಕ್ತಿ ಕಾರು ಚಲಾಯಿಸುತ್ತಿದ್ದರು ಎಂದು ದರ್ಶನ್ ಸ್ನೇಹಿತರು ಹೇಳಿದ್ದಾರೆ. ತನಿಖೆ ಬಳಿಕ ಈ ಕುರಿತು ಸಂಪೂರ್ಣ ಮಾಹಿತಿ ತಿಳಿಸಲಾಗುತ್ತದೆ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv