ಬೆಂಗಳೂರು: ಹಡಗು ಹಿಡಿದು ಪಡೆಯೆ ಬರಲಿ ಹೊಸಕಿ ಬಿಡುವೆ ಕಾಲಡಿ….ಬಾ ಬಾ ಬಾ ನಾ ರೆಡಿ…. ಎನ್ನುತ್ತಲೇ ಸದ್ದು ಮಾಡುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಮೊದಲ ಹಾಡು ಯೂಟ್ಯೂಬ್‍ನಲ್ಲಿನ ದಾಖಲೆಗಳನ್ನು ಉಡೀಸ್ ಮಾಡಿದೆ.
ಡಿ ಬಾಸ್ ಅಬ್ಬರಕ್ಕೆ ಸಿನಿಮಾಸಕ್ತರು ಫಿದಾ ಆಗಿದ್ದು, ಖಡಕ್, ಖದರ್ ಹಾಡಿಗೆ ಮನಸೋತಿದ್ದಾರೆ. ಹೆಚ್ಚು ವೀಕ್ಷಣೆ ಹಾಗೂ ಲೈಕ್‍ಗಳನ್ನು ಪಡೆಯುವ ಮೂಲಕ ಯೂಟ್ಯೂಬ್‍ನಲ್ಲಿನ ಸ್ಯಾಂಡಲ್‍ವುಡ್ ದಾಖಲೆಗಳನ್ನು ಉಡೀಸ್ ಮಾಡಿದೆ. ಇದರಿಂದಾಗಿ ದರ್ಶನ್ ತಮ್ಮ ಹಿಂದಿನ ದಾಖಲೆಗಳನ್ನು ಮುರಿದು, ಮತ್ತೊಮ್ಮೆ ಯೂಟ್ಯೂಬ್ ಬಾಸ್ ಆಗಿ ಹೊರ ಹೊಮ್ಮಿದ್ದಾರೆ. ಬಾ ಬಾ ಬಾ ನಾ ರೆಡಿ ಲಿರಿಕಲ್ ಹಾಡು ಅತೀ ವೇಗವಾಗಿ 1 ಲಕ್ಷ ವೀವ್ಸ್ ಪಡೆಯುವ ಮೂಲಕ ಯೂಟ್ಯೂಬ್‍ನಲ್ಲಿ ದಾಖಲೆ ಮಾಡಿದೆ.
ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ತಮ್ಮ ಸಂಗೀತ ಮೂಲಕವೇ ಮೋಡಿ ಮಾಡಿದ್ದು, ಕೇಳುಗರನ್ನು ಹಿಡಿದಿಡುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಹಾಡಿನ ಸಾಹಿತ್ಯ ಮಾಸ್ ಹೀರೋ ದರ್ಶನ್ ಅವರಿಗಾಗಿಯೇ ರಚಿತವಾದಂತಿದೆ. ಹಡಗು ಹಿಡಿದು ಪಡೆಯೇ ಬರಲಿ, ಹೊಸಕಿ ಬಿಡುವೆ ಕಾಲಡಿ, ಡಿ.. ಡಿ… ಬಾ ನಾ ರೆಡಿ ಸಾಲುಗಳು ಕೇಳುಗರಲ್ಲಿ ರೋಮಾಂಚನವನ್ನುಂಟು ಮಾಡುತ್ತವೆ.
ಹೀಗಾಗಿ ಹೆಚ್ಚು ವೀಕ್ಷಣೆಯಾಗುತ್ತಿದ್ದು, ದಾಖಲೆಗಳ ಮೇಲೆ ದಾಖಲೆ ನಿರ್ಮಿಸುತ್ತಿದೆ. 5 ನಿಮಿಷದಲ್ಲಿ 1 ಲಕ್ಷ ವೀವ್ಸ್ ಮಾತ್ರವಲ್ಲದೆ, ಕೇವಲ ಒಂದು ಗಂಟೆಯೊಳಗೆ 5 ಲಕ್ಷ ವೀಕ್ಷಣೆ ಪಡೆದು ಮುನ್ನುಗುತ್ತಿದೆ. ಲೈಕ್ಸ್‍ಗಳಲ್ಲಿಯೂ ಮುಂದಿದ್ದು, ಕೇವಲ 28 ನಿಮಿಷಗಳಲ್ಲಿ 50 ಸಾವಿರ ಲೈಕ್ಸ್, ಎರಡು ತಾಸಿನಲ್ಲಿ 90 ಸಾವಿರ ಲೈಕ್ಸ್ ಗಿಟ್ಟಿಸಿಕೊಂಡ ಕನ್ನಡದ ಗೀತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಹಿಂದೆ ಯುವರತ್ನ 50 ಸಾವಿರ ಲೈಕ್ಸ್ ಪಡೆಯಲು 2 ಗಂಟೆ ತೆಗೆದುಕೊಂಡರೆ, ಪೈಲ್ವಾನ್ 3 ಗಂಟೆ ತೆಗೆದುಕೊಂಡಿತ್ತು. ಹಾಗೆಯೇ ಕೆಜಿಎಫ್ ಸಿನಿಮಾ ಸಹ 22 ಗಂಟೆ ತೆಗೆದುಕೊಂಡಿತ್ತು ಎಂದು ವರದಿಯಾಗಿದೆ.
ಯಜಮಾನ ಚಿತ್ರದ ಯೋಗರಾಜ್ ಭಟ್ ಸಾಹಿತ್ಯದ ‘ಬಸಣ್ಣಿ ಬಾ’ ಹಾಡು ಕೇವಲ 6 ನಿಮಿಷಗಳಲ್ಲಿ 1 ಲಕ್ಷ ವೀವ್ಸ್ ಪಡೆದಿತ್ತು. ಅಲ್ಲದೆ ಚಕ್ರವರ್ತಿ ಚಿತ್ರದ ‘ಒಂದು ಮುಂಜಾನೆ’ ಹಾಡು ಕೇವಲ 7 ನಿಮಿಷದಲ್ಲಿ 1 ಲಕ್ಷ ಬಾರಿ ವೀಕ್ಷಣೆಯಾಗಿತ್ತು. ಇದೀಗ ಬಾ ಬಾ ಬಾ ನಾ ರೆಡಿ ಹಾಡು ಕೇವಲ 5 ನಿಮಿಷದಲ್ಲಿ 1 ಲಕ್ಷ ವೀವ್ಸ್ ಪಡೆಯುವ ಮೂಲಕ ದರ್ಶನ್ ಅವರ ಈ ಹಿಂದಿನ ಯೂಟ್ಯೂಬ್ ದಾಖಲೆಗಳನ್ನು ಪುಡಿ ಮಾಡಿದೆ. ಇದೀಗ ಬಾ ಬಾ ಬಾ ನಾ ರೆಡಿ ಗೀತೆಯು ಕೇವಲ 22 ತಾಸಿನಲ್ಲಿ 11.38 ಲಕ್ಷ ವೀಕ್ಷಣೆ ಪಡೆದಿದೆ.
ಆದರೆ ಲೈಕ್ಸ್ ವಿಷಯದಲ್ಲಿ ಕನ್ನಡದಲ್ಲೇ ಅತೀ ವೇಗವಾಗಿ 50 ಸಾವಿರ ಲೈಕ್ಸ್ ಪಡೆದ ಹೆಗ್ಗಳಿಕೆ ಯಜಮಾನ ಚಿತ್ರದ್ದಾಗಿದೆ. ಈ ಚಿತ್ರದ ಶಿವನಂದಿ ಗೀತೆ ಕೇವಲ 20 ನಿಮಿಷದಲ್ಲಿ 50 ಸಾವಿರ ಲೈಕ್ಸ್ ಪಡೆದಿತ್ತು.
ಅಲ್ಲದೆ ಟ್ರೈಲರ್ ವಿಷಯದಲ್ಲಿಯೂ ಕಳೆದ ವರ್ಷ ಬಿಡುಗಡೆಯಾದ ‘ಒಡೆಯ’ ಚಿತ್ರ ಟಾಪ್‍ನಲ್ಲಿದ್ದು, ಕೇವಲ 3 ನಿಮಿಷದಲ್ಲಿ 10 ಲಕ್ಷ ವೀವ್ಸ್ ಪಡೆದಿತ್ತು. ಏಳು ನಿಮಿಷದಲ್ಲಿ 20 ಲಕ್ಷ ಬಾರಿ ವೀಕ್ಷಣೆಯಾಗಿತ್ತು. ಇದು ಕನ್ನಡ ಚಿತ್ರದ ಇತಿಹಾಸದಲ್ಲೇ ದಾಖಲೆಯಾಗಿದೆ. ಲೈಕ್ಸ್ ವಿಚಾರದಲ್ಲಿಯೂ ಒಡೆಯ 10 ನಿಮಿಷಗಳಲ್ಲಿ 50 ಸಾವಿರ ಲೈಕ್ಸ್ ಪಡೆದಿತ್ತು. ಈ ಮೂಲಕ ತಮ್ಮದೇ ದಾಖಲೆಯನ್ನು ದರ್ಶನ್ ಬ್ರೇಕ್ ಮಾಡಿದ್ದರು. ಇದೇ ಒಡೆಯ ಚಿತ್ರದ ಟೀಸರ್ ಕೇವಲ 12 ನಿಮಿಷದಲ್ಲಿ 50 ಸಾವಿರ ಲೈಕ್ಸ್ ಪಡೆದಿತ್ತು.