ಬೆಂಗಳೂರು: ಹೈಕೋರ್ಟ್ 6 ವಾರಗಳ ಮಧ್ಯಂತರ ಜಾಮೀನು (Interim Bail) ಮಂಜೂರು ಮಾಡಿದ ಬೆನ್ನಲ್ಲೇ ಇಂದೇ ದರ್ಶನ್ (Darshan) ಬಳ್ಳಾರಿ ಜೈಲಿನಿಂದ (Ballari Jail) ಬಿಡುಗಡೆಯಾಗುವ ಸಾಧ್ಯತೆಯಿದೆ.
ಜಾಮೀನು ಆದೇಶ ಸಿಕ್ಕಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ದರ್ಶನ್ ಪರ ವಕೀಲರು, ಕೋರ್ಟ್ ಆರೋಗ್ಯ ಕಾರಣದಿಂದ 6 ವಾರಗಳ ಜಾಮೀನು ಮಂಜೂರು ಮಾಡಿದೆ. ನ್ಯಾಯಾಲಯದ ಎಲ್ಲಾ ಪ್ರಕ್ರಿಯೆಗಳನ್ನು ಮುಗಿದರೆ ಇಂದು ಸಂಜೆಯೇ ದರ್ಶನ್ ಅವರು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ದರ್ಶನ್‌ಗೆ ಜಾಮೀನು – ಪಾಸ್‌ಪೋರ್ಟ್ ಒಪ್ಪಿಸುವಂತೆ ಕೋರ್ಟ್ ಸೂಚಿಸಿದ್ದೇಕೆ?
ಕೋರ್ಟ್ ನಿರ್ದಿಷ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕೆಂದು ಹೇಳಿಲ್ಲ. ದರ್ಶನ್ ಅವರು ಈ ಹಿಂದೆ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಹೀಗಾಗಿ ಅಪೋಲೋ ಆಸ್ಪತ್ರೆಗೆ ತೆರಳುತ್ತಾರೋ ಅಥವಾ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೋ ಎನ್ನುವುದು ಅವರ ನಿರ್ಧಾರಕ್ಕೆ ಬಿಡಲಾಗಿದೆ ಎಂದು ತಿಳಿಸಿದರು.
ದರ್ಶನ್ ಇಂದು ಬಿಡುಗಡೆಯಾಗದೇ ಇದ್ದರೆ ಸೋಮವಾರ ಬಿಡುಗಡೆಯಾಗಬೇಕಾಗುತ್ತದೆ. ನಾಳೆಯಿಂದ ದೀಪಾವಳಿ ರಜೆ ಇರುವ ಕಾರಣ ಎಲ್ಲಾ ಪ್ರಕ್ರಿಯೆಗಳನ್ನು ಇಂದೇ ಮುಗಿಸಲು ವಕೀಲರ ತಂಡ ಈಗ ಕೆಲಸ ಮಾಡುತ್ತಿದೆ.
ಮೈಸೂರಿನಲ್ಲಿ ಶೂಟಿಂಗ್ ತೆರಳಿದ್ದ ದರ್ಶನ್ ಅವರನ್ನು ಪೊಲೀಸರು ಜೂನ್ 11 ರಂದು ಬೆಂಗಳೂರಿಗೆ ಕರೆ ತಂದು ಬಂಧಿಸಿದ್ದರು. 11 ದಿನಗಳ ಕಾಲ ಪೊಲೀಸರ ಕಸ್ಟಡಿಯಲ್ಲೇ ಇದ್ದ ದರ್ಶನ್ ಬಳಿಕ ವಿಚಾರಣಾ ಕೈದಿಯಾಗಿ ಜೈಲು ಸೇರಿದ್ದರು.
ಜೂನ್ 22 ಕ್ಕೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿತ್ತು. ಪರಪ್ಪನ ಅಗ್ರಹಾರ ಜೈಲಲ್ಲಿ ಪಾರ್ಟಿ ಮಾಡಿದ ಫೋಟೋ ವೈರಲ್ ಆದ ನಂತರ ಕೋರ್ಟ್ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿಸಿತ್ತು. 69 ದಿನ ಪರಪ್ಪನ ಅಗ್ರಹಾರದಲ್ಲಿ ಕಳೆದ ದರ್ಶನ್ ಆಗಸ್ಟ್ 29 ಕ್ಕೆ ಬಳ್ಳಾರಿ ಜೈಲಿಗೆ ಆಗಮಿಸಿದ್ದರು. 5 ತಿಂಗಳಿನಿಂದ ಕಂಬಿ ಹಿಂದೆ ಕಾಲ ಕಳೆದಿದ್ದ ದರ್ಶನ್‌ಗೆ ಈಗ ಬಿಡುಗಡೆಯಾಗುವ ಭಾಗ್ಯ ಸಿಕ್ಕಿದೆ.