ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇದೆ. ಹೀಗಾಗಿ ಡಿ ಬಾಸ್ ಹುಟ್ಟುಹಬ್ಬವನ್ನು ಆಚರಿಸಲು ಸಜ್ಜಾಗುತ್ತಿರುವ ಅಭಿಮಾನಿಗಳು ದರ್ಶನ್ ಮಾತಿಗೆ ಬೆಲೆಕೊಟ್ಟು ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ದವಸ-ಧಾನ್ಯ ವಿತರಿಸಿ ಮಾದರಿಯಾಗಿದ್ದಾರೆ.
ಫೆಬ್ರವರಿ 16ರಂದು ದರ್ಶನ್ ಅವರ ಹುಟ್ಟುಹಬ್ಬವಿದ್ದು, ಡಿ-ಬಾಸ್ ಜನ್ಮದಿನವನ್ನು ಅಭಿಮಾನಿಗಳು ದೊಡ್ಡ ಹಬ್ಬದಂತೆ ಆಚರಿಸುತ್ತಾರೆ. ನೆಚ್ಚಿನ ನಟನಿಗಾಗಿ ಅಭಿಮಾನಿಗಳು ಕೇಕ್, ಹಾರ, ಗಿಫ್ಟ್ ಗಳನ್ನು ತರುವುದು ಸಾಮಾನ್ಯ. ಆದರೆ ದರ್ಶನ್ ಅವರು, “ಬ್ಯಾನರ್, ಕೇಕ್ ಹಾಗೂ ಹಾರಗಳನ್ನು ದಯಮಾಡಿ ತರಬೇಡಿ. ಅದೇ ಹಣದಲ್ಲಿ ಈ ವರ್ಷವೂ ಸಹ ನಿಮ್ಮ ಕೈಲಾದ ಅಕ್ಕಿ, ಬೇಳೆ, ಸಕ್ಕರೆ ಹಾಗೂ ಇತರೆ ದವಸ-ಧಾನ್ಯಗಳನ್ನು ದಾನ ನೀಡಿ, ಅದನ್ನು ಒಗ್ಗೂಡಿಸಿ ಸೇರಬೇಕಾದ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಪ್ರಾಮಾಣಿಕವಾಗಿ ತಲುಪಿಸುವ ಜವಾಬ್ದಾರಿ ನನ್ನದು” ಎಂದು ಅಭಿಮಾನಿಗಳಿಗೆ ತಿಳಿಸಿದ್ದರು.
ಈ ಬಗ್ಗೆ ತಿಳಿಯುತ್ತಿದ್ದಂತೆ ಅಭಿಮಾನಿಗಳು ದವಸ-ಧಾನ್ಯಗಳನ್ನು ತಂದು ದರ್ಶನ್ ಅವರಿಗೆ ನೀಡುತ್ತಿದ್ದಾರೆ. ಅಕ್ಕಿ, ಬೇಳೆ ಸೇರಿದಂತೆ ಹಲವು ದವಸ-ಧಾನ್ಯಗಳು ತಂದುಕೊಟ್ಟು ಕೈಲಾದ ಸಹಾಯ ಮಾಡುತ್ತಿದ್ದಾರೆ. ಅಭಿಮಾನಿಗಳು ನೀಡಿದ್ದ ದವಸ ಧಾನ್ಯಗಳ ಮೂಟೆಯ ರಾಶಿಯೇ ದರ್ಶನ್ ಮನೆಯಲ್ಲಿದ್ದು, ರಾಶಿ ರಾಶಿ ಮೂಟೆಯನ್ನು ಈಗ ವಿತರಿಸುವ ಕೆಲಸ ನಡೆಯುತ್ತಿದೆ. ದರ್ಶನ್ ಹಾಗೂ ಅವರ ಅಭಿಮಾನಿಗಳು ಮಾಡುತ್ತಿರುವ ಈ ಕಾರ್ಯ ನಿಜಕ್ಕೂ ಎಲ್ಲರ ಮನ ಗೆದ್ದಿದೆ.
ಈಗಾಗಲೆ ಅನಾಥಾಶ್ರಮ, ವೃದ್ಧಾಶ್ರಮ ಸೇರಿದಂತೆ ಆಹಾರದ ಅಗತ್ಯವಿರುವವರಿಗೆ ಸಂಗ್ರಹವಾಗಿರುವ ದವಸ-ಧಾನ್ಯಗಳನ್ನು ವಿತರಿಸಲಾಗುತ್ತಿದೆ. ಅಭಿಮಾನಿಗಳು ಅನಾಥಾಶ್ರಮಕ್ಕೆ, ವೃದ್ಧಾಶ್ರಮಕ್ಕೆ ತೆರಳಿ ಅಕ್ಕಿ, ಬೇಳೆ ಧಾನ್ಯಗಳನ್ನು ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮಕ್ಕಳು ದರ್ಶನ್ ಹಾಗೂ ಅವರ ಅಭಿಮಾನಿಗಳಿಗೆ ಧನ್ಯವಾದ ಹೇಳಿ ಹುಟ್ಟುಹಬ್ಬಕ್ಕೆ ಶುಭಕೋರುತ್ತಿದ್ದಾರೆ. ಇತ್ತ ವೃದ್ಧಾಶ್ರಮದಲ್ಲಿರುವ ಹಿರಿಯರು ದರ್ಶನ್ ನಮಗೆ ಅನ್ನ ದಾನ ಮಾಡಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ನೂರು ವರ್ಷ ಚೆನ್ನಾಗಿ ಇರಲಿ ಎಂದು ಹರಸಿ ಖುಷಿ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷದ ದರ್ಶನ್ ಮಾತಿಗೆ ಬೆಲೆಕೊಟ್ಟು ಅಭಿಮಾನಿಗಳು ಅಕ್ಕಿ, ಬೇಳೆ ಸೇರಿದಂತೆ ಹಲವು ಪದಾರ್ಥಗಳನ್ನು ದಾನ ನೀಡಿ ಡಿ ಬಾಸ್ ಹುಟ್ಟುಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಿಸಿದ್ದರು. ಈ ವರ್ಷವು ಅದೇ ರೀತಿ ಅರ್ಥಪೂರ್ಣವಾಗಿ ದರ್ಶನ್ ಹುಟ್ಟುಹಬ್ಬ ಆಚರಣೆ ಮಾಡಲು ಅಭಿಮಾನಿಗಳು ಸಜ್ಜಾಗಿದ್ದಾರೆ.