ದಾವಣಗೆರೆ: ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿನಯದ ‘ಯಜಮಾನ’ ಚಿತ್ರ 100 ದಿನಗಳ ಪೂರೈಸಿದ್ದು, ದಾವಣಗೆರೆಯ ಗೀತಾಂಜಲಿ ಚಿತ್ರಮಂದಿರದಲ್ಲಿ ಅಭಿಮಾನಿಗಳು ಕೇಕ್ ಕತ್ತರಿಸಿ ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದ್ದಾರೆ.
ಜಿಲ್ಲಾ ದರ್ಶನ್ ಅಭಿಮಾನಿ ಸಂಘ ಈ ಆಚರಣೆ ಮಾಡಿ ಡಿ-ಬಾಸ್ ಗೆ ಜೈಕಾರ ಹಾಕಿದರು. ದರ್ಶನ್ ಅಭಿನಯದ ಯಜಮಾನ ಚಿತ್ರ ರಾಜ್ಯದಲ್ಲಿ ಯಶಸ್ವಿ ಪ್ರದರ್ಶನವಾಗಿದ್ದು, ಹತ್ತಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ನೂರು ದಿನ ಪೂರೈಸಿದೆ. ಕನ್ನಡ ಚಿತ್ರ ನೂರು ದಿನ ಪೂರೈಸುವುದೇ ಕಷ್ಟವಾಗಿದ್ದು, ಅಂತಹದರಲ್ಲಿ ಯಜಮಾನ 100 ದಿನ ಪೂರೈಸಿದೆ ಎಂದು ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದರು.
ಯಜಮಾನ ಚಿತ್ರ ಮಾರ್ಚ್ 1ರಂದು ವಿಶ್ವಾದ್ಯಂತ ಬಿಡುಗಡೆಯಾಗಿತ್ತು. ಈ ಚಿತ್ರ ಬಿಡುಗಡೆಯಾಗುವಾಗ ದರ್ಶನ್ ಅವರ 80 ಅಡಿ ಎತ್ತರದ ಕಟೌಟ್‍ಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿದ್ದರು. ಕಟೌಟ್ ಜೊತೆಗೆ ಮೊದಲ ಬಾರಿಗೆ ದರ್ಶನ್ ಪುತ್ರ ವಿನೀಶ್‍ನ 30 ಅಡಿ ಕಟೌಟನ್ನು ಕೂಡ ಹಾಕಲಾಗಿತ್ತು. ದರ್ಶನ್ ಅವರ ಯಜಮಾನ ಚಿತ್ರದಲ್ಲಿ ಅವರ ಮಗ ವಿನೀಶ್ ಅವರು ಒಂದು ವಿಶೇಷ ಹಾಡಿನಲ್ಲಿ ನಟಿಸಿದ್ದಾನೆ.
ಈ ಚಿತ್ರದ ಟ್ರೈಲರ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಅಲ್ಲದೇ ಯೂಟ್ಯೂಬ್ ಸಂಸ್ಥೆ ತನ್ನ ಟ್ವಿಟ್ಟರ್ ಖಾತೆಯಲ್ಲಿ, “ಈ ಅತಿಥಿ ಯಾವಾಗಲೂ ಗ್ರ್ಯಾಂಡ್ ಎಂಟ್ರಿ ಪಡೆಯುತ್ತಾರೆ. ಈ ಟ್ರೈಲರ್ ನೋಡಿದ್ದಾಗ ನಿಮಗೆ ಗೊತ್ತಾಗುತ್ತೆ” ಎಂದು ಚಿತ್ರದ ಫೋಟೋಗಳನ್ನು ಹಾಗೂ ಟ್ರೈಲರ್ ಲಿಂಕ್ ಹಾಕಿ ಟ್ವೀಟ್ ಮಾಡಿತ್ತು.
ಯಜಮಾನ ಚಿತ್ರದಲ್ಲಿ ದರ್ಶನ್‍ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ಹಾಗೂ ತಾನ್ಯ ಹೋಪ್ ಮಿಂಚಿದ್ದರು. ಡೈನಾಮಿಕ್ ಸ್ಟಾರ್ ದೇವರಾಜ್, ರವಿಶಂಕರ್, ಡಾಲಿ ಧನಂಜಯ್, ದತ್ತಣ್ಣ, ಶಿವರಾಜ್. ಕೆ.ಆರ್ ಪೇಟೆ, ಸಾಧುಕೋಕಿಲ ಸೇರಿದಂತೆ ಅತಿ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿ ಇತ್ತು.
ಈ ಚಿತ್ರವನ್ನು ಪೋನ್‍ಕುಮಾರ್ ಹಾಗೂ ವಿ. ಹರಿಕೃಷ್ಣ ಜಂಟಿಯಾಗಿ ನಿರ್ದೇಶಿಸಿದ್ದರು. ಸಂಗೀತ ನಿರ್ದೇಶಕರಾಗಿ ಬಜಾರ್ ನಲ್ಲಿ ಮಿನುಗುತ್ತಿರುವ ಹರಿಕೃಷ್ಣ, ಯಜಮಾನನಿಗಾಗಿ ಡೈರೆಕ್ಟರ್ ಕ್ಯಾಪ್ ತೊಟ್ಟು ನಿರ್ದೇಶಕರಾಗಿದ್ದರು. ಈ ಚಿತ್ರವನ್ನು ಶೈಲಜಾ ನಾಗ್ ಹಾಗೂ ಬಿ. ಸುರೇಶ್ ನಿರ್ಮಿಸಿದ್ದಾರೆ.
Leave a Reply