ಬೆಂಗಳೂರು: ಇದೊಂದು ಅಪರೂಪದ ಡ್ಯಾನ್ಸ್ ಆಗಿದ್ದು, ಸ್ಯಾಂಡಲ್‍ವುಡ್‍ನ ದಿಗ್ಗಜ ನಟರು ಒಟ್ಟಾಗಿ ಸೇರಿ ಸ್ಟೆಪ್ ಹಾಕಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ಆ್ಯಕ್ಷನ್ ಪ್ರಿನ್ಸ್ ಧ್ರುವ, ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮತ್ತು ಚಿರಂಜೀವಿ ಸರ್ಜಾ ಒಟ್ಟಿಗೆ ಸೇರಿ ಒಂದೇ ಥರದ ಕೇಸರಿ ಬಣ್ಣದ ಬಟ್ಟೆಯನ್ನು ಧರಿಸಿ ಆಂಜನೇಯನಿಗೆ ನೃತ್ಯ ನಮನ ಸಲ್ಲಿಸಿದ್ದಾರೆ.
ಅರ್ಜುನ್ ಸರ್ಜಾ ನಿರ್ದೇಶನದ `ಪ್ರೇಮಬರಹ’ ಚಿತ್ರದ ಹಾಡಿನ ಚಿತ್ರೀಕರಣವೊಂದು ಬೆಂಗಳೂರಿನ ಹಳೆಯ ಏರ್‍ಪೋರ್ಟ್ ರಸ್ತೆಯ ಬಳಿ ಇರುವ ಆಂಜನೇಯ ದೇವಸ್ಥಾನದಲ್ಲಿ ನಡೆಯುತ್ತಿದೆ. ಪ್ರೇಮಬರಹ ಚಿತ್ರದಲ್ಲಿ ದರ್ಶನ್, ಧ್ರುವ, ಚಿರಂಜೀವಿ ಹಾಗೂ ಅರ್ಜುನ್ ಸರ್ಜಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಹಾಡೊಂದಕ್ಕೆ ಸ್ಟೆಪ್ ಹಾಕಿದ್ದಾರೆ.
ಆಂಜನೇಯ ವಿಗ್ರಹದ ಮುಂದೆ ಸೆಟ್ ನಿರ್ಮಾಣ ಮಾಡಿ ನಾಲ್ವರು ನಟರು ಮತ್ತು ಸಹ ನೃತ್ಯ ತಂಡ ಕೇಸರಿ ಬಣ್ಣದ ಬಟ್ಟೆ, ತಲೆಗೆ ಪಟ್ಟಿಯನ್ನು ಕಟ್ಟಿಕೊಂಡು, ಕೆಂಪು ಬಣ್ಣವನ್ನು ಮೈ, ಮುಖಕ್ಕೆ ಹಚ್ಚಿಕೊಂಡು “ರಾಮನ ಪಂಚಪ್ರಾಣ ಹನುಮ, ಹನುಮ’ ಎಂಬ ಹಾಡಿಗೆ ಸ್ಟೆಪ್ ಹಾಕಿದ್ದಾರೆ.
ಪ್ರೇಮಬರಹ ಸಿನಿಮಾದಲ್ಲಿ ಅರ್ಜುನ್ ಸರ್ಜಾ ಮಗಳು ಐಶ್ವರ್ಯ ಅರ್ಜುನ್ ಮತ್ತು ಚಂದನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.