ಮೈಸೂರು: ದರ್ಶನ್‍ಗೆ ಅಪಘಾತವಾದ ಹಿನ್ನೆಲೆ ಯಾರು ಆಸ್ಪತ್ರೆ ಬಳಿ ಬರಬೇಡಿ ಎಂದು ನಟ ದರ್ಶನ್ ಮನವಿ ಮಾಡಿದ್ದರೂ, ಅಭಿಮಾನಿಯೊಬ್ಬ ಆಸ್ಪತ್ರೆಗೆ ಬಂದು ದರ್ಶನ್ ಬೆಡ್ ಮೇಲೆ ಮಲಗಿದ್ದ ಫೋಟೋ ತೆಗೆದಿದ್ದಾನೆ. ಇದರಿಂದಾಗಿ ದರ್ಶನ್ ಆಪ್ತರು ಅಭಿಮಾನಿಯ ಮೊಬೈಲ್ ಅನ್ನು ಒಡೆದುಹಾಕಿದ್ದಾರೆ.
ಈ ಘಟನೆ ಸೋಮವಾರ ಸಂಜೆ ಕೊಲಂಬಿಯಾ ಆಸ್ಪತ್ರೆಯ ಬಳಿ ನಡೆದಿದೆ. ಅಭಿಮಾನಿಯೊಬ್ಬ ನಟ ದರ್ಶನ್ ಅವರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಹೋಗಿದ್ದನು. ಈ ವೇಳೆ ದರ್ಶನ್ ಬೆಡ್ ಮೇಲೆ ಮಲಗಿದ್ದ ಫೋಟೋ ತೆಗೆದಿದ್ದಾನೆ. ಇದರಿಂದ ಅನುಮಾನಗೊಂಡು ಮೊಬೈಲ್ ಚೆಕ್ ಮಾಡಿದ ದರ್ಶನ್ ಆಪ್ತರು ಮೊಬೈಲ್ ನಲ್ಲಿ ಫೋಟೋ ಕಾಣಿಸುತ್ತಿದ್ದಂತೆ ನೆಲಕ್ಕೆ ಮೊಬೈಲ್ ಬಡಿದು ವಾರ್ನ್ ಮಾಡಿದ್ದಾರೆ. ಇದನ್ನೂ ಓದಿ: ದರ್ಶನ್ ಅಪಘಾತವಾಗಿದ್ದ ಕಾರ್ ಮಿಸ್ಸಿಂಗ್ ಸ್ಟೋರಿಯ ಇನ್‍ಸೈಡ್ ಸ್ಟೋರಿ ಇಲ್ಲಿದೆ
ಘಟನೆಯೇನು?:
ಶನಿವಾರ ನಟರಾದ ದರ್ಶನ್, ಸೃಜನ್ ಲೋಕೇಶ್ ಹಾಗೂ ದೇವರಾಜ್ ಕುಟುಂಬ ಮೈಸೂರು ಮೃಗಾಲಯಕ್ಕೆ ತೆರಳಿ ಪ್ರಾಣಿಗಳನ್ನು ದತ್ತು ತೆಗೆದುಕೊಂಡಿದ್ದರು. ಆ ಬಳಿಕ ಮೈಸೂರಿನಲ್ಲೇ ಉಳಿದುಕೊಂಡು ಸೋಮವಾರ ಮುಂಜಾನೆ ಅಲ್ಲಿಂದ ಹೊರಟಿದ್ದರು. ಹೀಗೆ ಕಾರ್ ನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಮೈಸೂರು ಹೊರವಲಯದ ಹಿನಕಲ್ ಬಳಿ ಕಾರ್ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ದರ್ಶನ್ ಅವರ ಬಲಗೈನ ಮೂಳೆ ಮುರಿದಿದ್ದು, ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ಬಲಗೈಗೆ ರಾಡ್ ಅಳವಡಿಸಲಾಗಿದ್ದು, 24 ಹೊಲಿಗೆ ಹಾಕಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದರು.
ದರ್ಶನ ಅವರು ಈಗಾಗಲೇ ಅಭಿಮಾನಿಗಳಿಗೆ ತಾವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ, ವಿಡಿಯೋ ತೆಗೆಯದಂತೆ ಎಲ್ಲರಿಗೂ ತಾಕೀತು ಮಾಡಿದ್ದರು. ಅಷ್ಟೇ ಅಲ್ಲದೇ ಆಸ್ಪತ್ರೆಯಿಂದಲೇ ವಾಯ್ಸ್ ರೆಕಾರ್ಡ್ ಮಾಡಿ ಅದನ್ನು ವಾಟ್ಸಪ್ ನಲ್ಲಿ ಕಳುಹಿಸುವ ಮೂಲಕ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಇದನ್ನೂ ಓದಿ: ದರ್ಶನ್ ಸೇಫ್ ಆಗಿದ್ದು, ಯಾರಾದ್ರು ರೂಮರ್ಸ್ ಹಬ್ಬಿಸಿದ್ರೆ ನಂಬಬೇಡಿ: ಸೃಜನ್ ಲೋಕೇಶ್
ಎಲ್ಲರಿಗೂ ನಮಸ್ಕಾರಪ್ಪ ನನ್ನ ಅನ್ನದಾತರು, ಅಭಿಮಾನಿಗಳಲ್ಲಿ ನನ್ನದೊಂದು ಮನವಿ ದಯವಿಟ್ಟು ನನಗೆ ಏನೂ ಆಗಿಲ್ಲ. ಆರಾಮಾಗಿರಿ. ಒಂದು ದಿನ ಆಸ್ಪತ್ರೆಯಲ್ಲಿದ್ದು, ನಾಳೆ ಬರುತ್ತೇನೆ. ಆ ಬಳಿಕ ಎಲ್ಲರಿಗೂ ಸಿಗುತ್ತೇನೆ. ಹೀಗಾಗಿ ದಯವಿಟ್ಟು ಯಾರೂ ಆಸ್ಪತ್ರೆಯತ್ತ ಬರಬೇಡಿ. ಇದೊಂದು ನನ್ನ ಮನವಿ ಅಂತಾನೇ ತಿಳಿದುಕೊಳ್ಳಿ. ಯಾಕಂದ್ರೆ ಬೇರೆ ರೋಗಿಗಳು ಆಸ್ಪತ್ರೆಯಲ್ಲಿದ್ದಾರೆ. ಹೀಗಾಗಿ ಅವರಿಗೆ ತೊಂದರೆಯಾಗುತ್ತದೆ ಎಂಬುದು ನನ್ನ ಭಾವನೆ. ಒಟ್ಟಿನಲ್ಲಿ ಎಲ್ಲರೂ ಆರಾಮಾಗಿರಿ. ನಿಮ್ಮ ದರ್ಶನ್ ಗೆ ಏನೂ ಆಗಿಲ್ಲ. ಧನ್ಯವಾದ ಅಂತ ತಿಳಿಸಿದ್ದರು. ಇದನ್ನೂ ಓದಿ: ವೈದ್ಯರಿಂದ ದರ್ಶನ್, ದೇವರಾಜ್ X-RAY ಬಿಡುಗಡೆ: ಎಲ್ಲೆಲ್ಲಿ ಗಾಯವಾಗಿದೆ?
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv