ಪ್ರತಿ ವರ್ಷದಂತೆ ಈ ವರ್ಷವೂ ನಟ ದರ್ಶನ್ ತಮ್ಮ ಹುಟ್ಟು ಹಬ್ಬದ ಕುರಿತಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಕೆಲವೇ ದಿನಗಳು ಬಾಕಿ ಇದ್ದು ಈ ಸಂದರ್ಭದಲ್ಲಿ ಅಭಿಮಾನಿಗಳು ಯಾರು ಸಹ ಬ್ಯಾನರ್, ಕೇಕ್ ಹಾಗೂ ಹಾರಗಳನ್ನು ದಯಮಾಡಿ ತರಬೇಡಿ. ಅದೇ ಹಣದಲ್ಲಿ ನಿಮ್ಮ ಕೈಲಾದ ಅಕ್ಕಿ, ಬೇಳೆ, ಸಕ್ಕರೆ ಹಾಗೂ ಇತರೆ ದವಸ-ಧಾನ್ಯಗಳನ್ನು ದಾನ ನೀಡಿ ಎಂದು ವಿನಂತಿ ಮಾಡಿಕೊಂಡಿದ್ದಾರೆ.
ಈ ಬಾರಿ ಹುಟ್ಟು ಹಬ್ಬವು ವಿಶೇಷವಾಗಿ ಇರಲಿದೆ. ಯಾಕೆಂದರೆ ದರ್ಶನ್ ನಟನೆಯ ಕಾಟೇರ ಸಿನಿಮಾಗೆ ಭಾರೀ ಯಶಸ್ಸು ಸಿಕ್ಕಿದೆ. ಜೊತೆಗೆ ಸಿನಿಮಾ ಮತ್ತೊಂದು ದಾಖಲೆ ಬರೆದಿದೆ. ಒಂದು ಕೋಟಿಗೂ ಅಧಿಕ ಟಿಕೆಟ್ ಮಾರಾಟವಾಗುವ ಮೂಲಕ 206 ಕೋಟಿ ರೂಪಾಯಿಯನ್ನು ಬಾಕ್ಸ್ ಆಫೀಸಿನಿಂದ (Box Office) ಕೊಳ್ಳೆ ಹೊಡೆದಿದೆ. 200 ಕೋಟಿ ರೂಪಾಯಿ ಕ್ಲಬ್ ಸೇರಿದ ಪೋಸ್ಟರ್ ಅನ್ನು ದರ್ಶನ್ ಅಭಿಮಾನಿಗಳು ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.
ಈ ನಡುವೆ ಸುದೀಪ್ ಮತ್ತೊಂದು ಸಂಭ್ರಮದ ಸುದ್ದಿ ಕೊಟ್ಟಿದ್ದಾರೆ. ಕೆಲವು ದಿನಗಳಿಂದ ಕಾಟೇರ (Katera) ಸಿನಿಮಾವನ್ನು ಕಿಚ್ಚ ಸುದೀಪ್ (Sudeep) ನೋಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ಜೊತೆ ಸುದೀಪ್ ಮಾತನಾಡಿ, ಅತೀ ಶೀಘ್ರದಲ್ಲೇ ಸಿನಿಮಾ ನೋಡುತ್ತೇನೆ ಎಂದು ಹೇಳಿದ್ದಾಗಿ ವರದಿ ಆಗಿತ್ತು. ಅದೀಗ ನಿಜವಾಗಿದೆ. ಸುದೀಪ್ ಕಾಟೇರ ಸಿನಿಮಾವನ್ನು ವೀಕ್ಷಿಸಿದ್ದಾರೆ. ಈ ಮಾಹಿತಿಯನ್ನು ಸ್ವತಃ ಸುದೀಪ್ ಅವರೇ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.
ಈ ಹಿಂದೆ ನಡೆದ ಸೆಲೆಬ್ರಿಟಿ ಶೋಗೆ ಬರುವಂತೆ ಸುದೀಪ್ ಅವರಿಗೆ ಕಾಟೇರ ತಂಡದಿಂದ ಕರೆ ಹೋಗಿತ್ತು. ಕಿಚ್ಚ ಶೂಟಿಂಗ್ ನಲ್ಲಿ ಇರುವ ಕಾರಣದಿಂದಾಗಿ ಬರುವುದಕ್ಕೆ ಆಗಿರಲಿಲ್ಲ. ಆದರೆ ಅತೀ ಶೀಘ್ರದಲ್ಲೇ ಸಿನಿಮಾ ನೋಡುವುದಾಗಿ ಸುದೀಪ್ ಹೇಳಿದ್ದರು. ಇದೀಗ ಕೊಟ್ಟ ಮಾತಿನಂತೆ ಸಿನಿಮಾ ವೀಕ್ಷಣೆ ಮಾಡಿದ್ದಾರೆ.