ಮೈಸೂರು: ಈ ಬಾರಿಯ ದಸರಾ ಹಬ್ಬದ ಸಿದ್ಧತೆಗಳು ನಡೆಯುತ್ತಿರುವ ನಡುವೇ ಸ್ಯಾಂಡಲ್ ವುಡ್ ನಟರ ದಂಡು ಮೈಸೂರು ಅರಮನೆ ಅಂಗಳಕ್ಕೆ ಆಗಮಿಸಿದ್ದು, ಹಬ್ಬದ ಸಂಭ್ರಮಕ್ಕೂ ಮುನ್ನವೇ ಸಂತಸ ವಾತಾರಣ ನಿರ್ಮಾಣವಾಗಲು ಕಾರಣವಾಯಿತು.
ಚಾಲೆಂಜಿಗ್ ಸ್ಟಾರ್ ದರ್ಶನ್, ಸೃಜನ್ ಲೋಕೇಶ್, ಪ್ರಜ್ವಲ್ ದೇವರಾಜ್, ಹಾಸ್ಯ ನಟರಾದ ವಿಶ್ವ, ಮಂಡ್ಯ ರಮೇಶ್ ಸೇರಿದಂತೆ ಹಲವು ನಟರು ಇಂದು ಅರಮನೆ ಆವರಣಕ್ಕೆ ಆಗಮಿಸಿದ್ದರು. ಈ ವೇಳೆ ಗಜಪಡೆ ಕಂಡು ಖುಷಿ ಪಟ್ಟರು. ಅಂಬಾರಿ ಆನೆ ಅರ್ಜುನನ್ನು ಕಂಡ ದರ್ಶನ್, ಅದರ ಮೈಸವರಿ ಖುಷಿ ಪಟ್ಟರು. ಬಳಿಕ ಗಜಪಡೆಯೊಂದಿಗೆ ಆಗಮಿಸಿರುವ ಕಾವಾಡಿ ಮತ್ತು ಮಾವುತರ ಕುಟುಂಬಸ್ಥರನ್ನ ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದರು.
Advertisement
Advertisement
ನಟ ದರ್ಶನ್ ಇದೇ ವೇಳೆ ಮಾವುತರು ಮತ್ತು ಕಾವಾಡಿ ಕುಟುಂಬಕ್ಕೆ ಆತಿಥ್ಯ ಕಾರ್ಯಕ್ರಮ ಆಯೋಜಿಸಿದ್ದರು. ಈ ಆತಿಥ್ಯ ಕಾರ್ಯಕ್ರಮದಲ್ಲಿ ಸಿನಿತರೆಯಾರರೊಂದಿಗೆ ರಾಜವಂಶಸ್ಥ ಯದುವೀರ್ ಕೂಡ ಭಾಗವಹಿಸಿದ್ದು ವಿಶೇಷವಾಗಿತ್ತು. ಈ ಕಾರ್ಯಕ್ರಮದಲ್ಲಿ ಎಲ್ಲರೊಂದಿಗೆ ಊಟ ಮಾಡುವ ಮೂಲಕ ನಟರು ತಮ್ಮ ಸರಳತೆ ಮೆರೆದರು.
Advertisement
Advertisement
ಈ ವೇಳೆ ಮಾತನಾಡಿದ ಯದುವೀರ್, ನಟ ದರ್ಶನ್ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಎಲ್ಲರು ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಸಂತಸ ತಂದಿದೆ. ಈ ಬಾರಿ ಅರಮನೆಯಲ್ಲಿ ದಸರಾ ಕಾರ್ಯಕ್ರಮಗಳು ಎಂದಿನಂತೆ ನಡೆಯಲಿದ್ದು, ಆದ್ಯವೀರ್ ಕೂಡ ಈ ಬಾರಿಯ ದಸರಾ ಕ್ಷಣಗಳಿಗೆ ಭಾಗಿಯಾಗುತ್ತಿರುವುದು ಮತ್ತಷ್ಟು ಸಂತಸ ತಂದಿದೆ. ಅಕ್ಟೋಬರ್ 10 ರಿಂದ ಅರಮನೆಯಲ್ಲಿ ದಸರಾ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು, ವಿಜಯ ದಶಮಿ 19ಕ್ಕೆ ನಿಗಧಿಯಾಗಿದೆ. ಪ್ರತಿ ವರ್ಷದಂತೆ ಎಲ್ಲಾ ಕಾರ್ಯಕ್ರಮಗಳು ನಡೆಯುತ್ತವೆ. ಅಲ್ಲದೇ ದಸರಾ ಕಾರ್ಯಕ್ರಮಗಳು ಈಗಾಗಲೇ ಚುರುಕುಗೊಂಡಿವೆ ಎಂದು ತಿಳಿಸಿದರು.
ಆತಿಥ್ಯ ಕಾರ್ಯಕ್ರಮದ ಬಳಿಕ ನಟ ದರ್ಶನ್ ಹಾಗೂ ಯದುವೀರ್, ಮಾವುತ ಮತ್ತು ಕಾವಾಡಿ ಕುಟುಂಬಸ್ಥರಿಗೆ ಹೊಸ ಬಟ್ಟೆ, ಬೆಡ್ ಶೀಟ್, ಮಕ್ಕಳಿಗೆ ಶಾಲಾ ಬ್ಯಾಗ್ ವಿತರಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv