ಕನ್ನಡದಲ್ಲಿ ಮತ್ತೊಂದು ಐತಿಹಾಸಿಕ ಸಿನಿಮಾ ಮೂಡಿ ಬರುತ್ತಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗೆರಿಲ್ಲಾ ವಾರ್ ಮಾಡುವ ಮೂಲಕ ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದ ಹಲಗಲಿ ಬೇಡರ (Halagali Bedru) ಕಥೆಯನ್ನು ಸಿನಿಮಾ ಮಾಡುತ್ತಿದ್ದಾರೆ ನಿರ್ದೇಶಕ ಸುಕೇಶ್ ಡಿ.ಕೆ. ಈ ಸಿನಿಮಾಗೆ ಡಾರ್ಲಿಂಗ್ ಕೃಷ್ಣ (Darling Krishna) ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ಈಗ ಈ ಸಿನಿಮಾದಿಂದ ಅವರು ಆಚೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಡೇಟ್ ಸಮಸ್ಯೆಯ ಕಾರಣದಿಂದಾಗಿ ಕೃಷ್ಣ ಇಂಥದ್ದೊಂದು ನಿರ್ಧಾರ ತಗೆದುಕೊಂಡಿದ್ದಾರಂತೆ.
ಇದೊಂದು ಐತಿಹಾಸಿಕ ಸಿನಿಮಾವಾಗಿದ್ದರಿಂದ ಮತ್ತು ಆ ಕಾಲ ಘಟ್ಟವನ್ನು ಕಟ್ಟಿ ಕೊಡಬೇಕಾಗಿದ್ದರಿಂದ ಬರೋಬ್ಬರಿ 80 ಕೋಟಿ ರೂಪಾಯಿಯನ್ನು ಈ ಸಿನಿಮಾಗಾಗಿ ಖರ್ಚು ಮಾಡುತ್ತಿದ್ದಾರೆ ನಿರ್ಮಾಪಕ ಕಲ್ಯಾಣ್ ಚಕ್ರವರ್ತಿ ಧೂಳಿಪಳ್ಯ. ಇದೊಂದು ಅಪರೂಪದ ಕಥನವಾಗಿದ್ದರಿಂದ ಸರ್ವ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಈ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಯೋಧನೊಬ್ಬನ ಪಾತ್ರವನ್ನು ನಿರ್ವಹಿಸಬೇಕಿದ್ದರಿಂದ ಸಖತ್ ತಯಾರಿ ಕೂಡ ಮಾಡಿಕೊಳ್ಳುತ್ತಿದ್ದರು. ಅಷ್ಟರಲ್ಲಿ ಇಂಥದ್ದೊಂದು ಸುದ್ದಿ ಹರಿದಾಡುತ್ತಿದೆ. ಈಗಾಗಲೇ ಸದ್ದಿಲ್ಲದೇ ಚಿತ್ರಕ್ಕೆ ಮುಹೂರ್ತ ಕೂಡ ನಡೆದಿದೆ. ಜೊತೆಗೆ ಮೊದಲ ಹಂತದ ಶೂಟಿಂಗ್ ಕೂಡ ಮಾಡುತ್ತಿದ್ದಾರಂತೆ ನಿರ್ದೇಶಕರು. ಅಮೆರಿಕಾ ಹಾಗೂ ರಷ್ಯನ್ ಕಲಾವಿದರು ಮೊದಲ ದಿನದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ.
ನಿರ್ದೇಶಕ ಸುಕೇಶ್ ಈ ಹಿಂದೆ ಕೃಷ್ಣ ತುಳಿಸಿ ಚಿತ್ರ ಮಾಡಿದವರು. ಸಂಚಾರಿ ವಿಜಯ್ ಈ ಸಿನಿಮಾದ ಹೀರೋ. ಅಂದು ಲವ್ ಸ್ಟೋರಿ ಕೊಟ್ಟಿದ್ದ ಸುಕೇಶ್ ಇಂದು ಐತಿಹಾಸಿಕ ಚಿತ್ರಕ್ಕೆ ಕೈ ಹಾಕಿದ್ದಾರೆ.