ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಆಡುತ್ತಿದ್ದ ವೇಳೆ ತಂಡದಲ್ಲಿ ಹಿಂದೂ ಕ್ರಿಕೆಟ್ ಆಟಗಾರರನ್ನು ಎಷ್ಟು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದರು ಎಂಬುವುದನ್ನು ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಬಹಿರಂಗ ಪಡಿಸಿದ್ದಾರೆ.
ಪಾಕ್ ಕ್ರಿಕೆಟ್ ತಂಡದಲ್ಲಿ ಹೆಚ್ಚಿನ ಆಟಗಾರರು ಧರ್ಮ, ಜಾತಿ, ಪ್ರದೇಶದ ಆಧಾರದ ಮೇಲೆ ತಾರತಮ್ಯ ಮಾಡುತ್ತಿದ್ದರು. ಮಾಜಿ ಆಟಗಾರ ದಾನಿಶ್ ಕನೇರಿಯಾ ಅವರು ಸಾಕಷ್ಟು ತಾರತಮ್ಯಕ್ಕೆ ಒಳಗಾಗಿದ್ದಾರೆ. ಅವರೊಂದಿಗೆ ಕುಳಿತು ಊಟ ಮಾಡಲು ಕೂಡ ಆಟಗಾರರು ಇಷ್ಟ ಪಡುತ್ತಿರಲಿಲ್ಲ. ಇಡೀ ತಂಡ ಇದೇ ರೀತಿ ವರ್ತಿಸುತಿತ್ತು. ಅದರಲ್ಲೂ ಹೆಚ್ಚಿನ ಆಟಗಾರರು ಈ ರೀತಿ ಇದ್ದರು ಎಂದು ಅಖ್ತರ್ ಹೇಳಿದ್ದಾರೆ.
ಯಾವಾಗಲೂ ನಿನ್ನ ಧರ್ಮ ಯಾವುದು? ಪ್ರದೇಶ ಯಾವುದು? ಎಂದು ಮಾತನಾಡುತ್ತಿದ್ದರು. ಕರಾಚಿ, ಪಂಜಾಬ್, ಪೇಜಾವರ್ ಪ್ರದೇಶಕ್ಕೆ ಸೇರಿದವರಾ ಎಂದು ಹೆಚ್ಚು ಚರ್ಚೆ ಮಾಡುತ್ತಿದ್ದರು. ಅದರಲ್ಲೂ ಮೂವರು ಆಟಗಾರರು ಹೆಚ್ಚು ಈ ರೀತಿ ವರ್ತಿಸುತ್ತಿದ್ದರು. ಹಿಂದೂ ಎಂಬ ಕಾರಣಕ್ಕೆ ದಾನಿಶ್ ರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದರು. ಆದರೆ ಅಂದು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯವನ್ನು ಆತನಿಂದಲೇ ಗೆಲುವು ಪಡೆದಿದ್ದೆವು. ಆತ ತಂಡದಲ್ಲಿರದಿದ್ದರೆ ಖಂಡಿತಾ ಪಂದ್ಯವನ್ನು ಕಳೆದುಕೊಳ್ಳುತ್ತಿದ್ದೆವು. ಆದರೆ ಆತನಿಗೆ ಲಭಿಸಬೇಕಾದ ಗೌರವ ಮಾತ್ರ ಲಭಿಸಲಿಲ್ಲ ಎಂದಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ದಾನಿಶ್ ಕನೇರಿಯಾ, ಅಖ್ತರ್ ಹೇಳಿರುವುದು ಸತ್ಯ. ಆತ ಒಬ್ಬ ಲೆಜೆಂಡ್ ಆಟಗಾರ. ನನಗೆ ಯಾವಾಗಲೂ ಬೆಂಬಲವಾಗಿ ನಿಂತಿರುತ್ತಿದ್ದ. ಆದರೆ ಆ ಸಮಯದಲ್ಲಿ ತಂಡದ ಇತರೆ ಆಟಗಾರರು ತಾರತಮ್ಯ ಮಾಡುತ್ತಿದ್ದರು. ಅಖ್ತರ್ ರೊಂದಿಗೆ ಕೆಲ ಆಟಗಾರರು ಕೂಡ ಬೆಂಬಲ ನೀಡಿದ್ದಾರೆ. ಶೀಘ್ರದಲ್ಲೇ ನನ್ನ ವಿರುದ್ದ ತಾರತಮ್ಯ ನಡೆಸಿದ ಆಟಗಾರರ ಹೆಸರುಗಳನ್ನು ಬಹಿರಂಗ ಪಡಿಸುತ್ತೇನೆ ಎಂದಿದ್ದಾರೆ. ಅಲ್ಲದೇ ಪಾಕ್ ಪರ ಆಡುವುದು ಅದೃಷ್ಟವಾಗಿದ್ದು, ಅದನ್ನು ಗೌರವಿಸುತ್ತೇನೆ ಎಂದಿದ್ದಾರೆ.
ಪಾಕಿಸ್ತಾನ ಪರ ಅಂತರ್ ರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡಿದ 2ನೇ ಆಟಗಾರ ದಾನಿಶ್ ಆಗಿದ್ದು, ಅನಿಲ್ ದಲ್ಪತ್ ಮೊದಲ ಆಟಗಾರ. ದಾನಿಶ್ ಪಾಕ್ ಪರ 61 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 261 ವಿಕೆಟ್ ಪಡೆದಿದ್ದರೆ. ಏಕದಿನ ಕ್ರಿಕೆಟ್ ನಲ್ಲಿ 18 ಪಂದ್ಯಗಳಿಂದ 15 ವಿಕೆಟ್ ಗಳಿಸಿದ್ದಾರೆ.