ಚಿಕ್ಕಬಳ್ಳಾಪುರ: ಕುಡಿಯುವ ನೀರಿಗೂ ಹಾಹಾಕಾರವಿದ್ದ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿದ ಮಳೆಗೆ ಗತಕಾಲದ ಜಲವೈಭವ ಮರುಕಳುಸುತ್ತಿದೆ. ಜಿಲ್ಲೆಯಲ್ಲೇ ಈ ವರ್ಷ ಮೊಟ್ಟ ಮೊದಲ ಬಾರಿಗೆ ಜಲಾಶಯವೊಂದು ತುಂಬಿ ತುಳುಕುತ್ತಿದ್ದು, ಪ್ರವಾಸಿಗರನ್ನ ತನ್ನತ್ತ ಬರಸೆಳೆಯುತ್ತಿದೆ.
ಬರದನಾಡು ಚಿಕ್ಕಬಳ್ಳಾಪುರ ಜಿಲ್ಲೆಯ ಅರೆಮಲೆನಾಡು ಖ್ಯಾತಿಯ ಮಂಚೇನಹಳ್ಳಿ ಹೋಬಳಿಯ ದಂಡಿಗಾನಹಳ್ಳಿ ಡ್ಯಾಂ ಹಚ್ಚು ಹಸುರಿನ ಬೆಟ್ಟ ಗುಡ್ಡಗಳ ನಡುವೆ ಮೈದುಂಬಿ ಹರಿಯುತ್ತಿದೆ. ಕಳೆದ ಒಂದು ವಾರದಿಂದ ಜಿಲ್ಲೆಯ ಮೇಲೆ ವರುಣದೇವ ಕೃಪೆ ತೋರಿದ್ದು, ಜಿಲ್ಲೆಯ ಗತಕಾಲದ ಜಲವೈಭವ ಮರುಕಳಿಸುತ್ತಿದೆ.
Advertisement
Advertisement
ಜಿಲ್ಲೆಯ ಹಲವು ಕೆರೆಗಳಿಗೆ ನೀರು ಹರಿದುಬಂದಿದ್ದು, ದಂಡಿಗಾನಹಳ್ಳಿ ಡ್ಯಾಂ ಸಂಪೂರ್ಣ ಭರ್ತಿಯಾಗಿದೆ. ದಂಡಿಗಾನಹಳ್ಳಿ ಡ್ಯಾಂ ಕೋಡಿ ಹರಿದಿದೆ. ಈ ವರ್ಷ ಜಿಲ್ಲೆಯಲ್ಲೇ ಕೋಡಿ ಹರಿದ ಮೊಟ್ಟ ಮೊದಲ ಕೆರೆಯಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿಇಓ ಫೌಸಿಯಾ ತರನಮ್ ಸಂತಸದಿಂದ ಹೇಳಿದ್ದಾರೆ.
Advertisement
ಎಂದು ಬತ್ತದ ಕೆರೆಯಂತಲೇ ಫೇಮಸ್ ಆಗಿರುವ ಈ ದಂಡಿಗಾನಹಳ್ಳಿ ಜಲಾಶಯ ಬತ್ತಿದ ಉದಾಹಾರಣೆಗಳಿಲ್ಲ. ಸುತ್ತಲೂ ಹಸಿರ ತೋರಣಗಳಂತೆ ಆವರಿಸಿರುವ ಬೆಟ್ಟಗಳ ಮಧ್ಯೆ ನೆಲೆ ನಿಂತಿರುವ ಈ ದಂಡಿಗಾನಹಳ್ಳಿ ಜಲಾಶಯ ತನ್ನ ಪ್ರಾಕೃತಿಕ ಸೊಬಗಿನಿಂದ ಸದಾ ತನ್ನತ್ತ ಪ್ರವಾಸಿಗರನ್ನ ಬರಸೆಳೆಯುತ್ತದೆ ಎಂದು ಪ್ರವಾಸಿಗರು ಹರ್ಷ ವ್ಯಕ್ತಪಡಿಸಿದ್ದಾರೆ.
Advertisement
ದಂಡಿಗಾನಹಳ್ಳಿ ಡ್ಯಾಂ ಕೋಡಿ ಹರಿದ ವಿಷಯ ತಿಳಿದು ಜಿಲ್ಲಾಪಂಚಾಯತ್ ಸಿಇಓ ಜಲಾಶಯಕ್ಕೆ ಭೇಟಿ ನೀಡಿ ಬಾಗಿನ ಅರ್ಪಿಸಿದರು. ಅಂದಹಾಗೆ ಈ ದಂಡಿಗಾನಹಳ್ಳಿ ಡ್ಯಾಂ ತನ್ನ ಪ್ರಾಕೃತಿಕ ಸೊಬಗಿನಿಂದ ಬಲು ಆಕರ್ಷಕವಾಗಿದ್ದು, ಸದಾ ಪ್ರವಾಸಿಗರ ಮನ ಸೆಳೆಯುತ್ತದೆ.