ಬೆಂಗಳೂರು: ಮುಂಗಾರು ಅಬ್ಬರದಿಂದಾಗಿ ಕಾವೇರಿಕೊಳ್ಳದ ಡ್ಯಾಂಗಳು ಎಲ್ಲಾ ಭರ್ತಿಯಾಗಿವೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ನೀರು ಬಳಕೆಗೆ ಸಂಬಂಧ ಕರ್ನಾಟಕದಿಂದ ಮನವಿ ಸಾಧ್ಯತೆಗಳಿವೆ.
ಕೆಆರ್‍ಎಸ್, ಕಬಿನಿ, ಹಾರಂಗಿ, ಹೇಮಾವತಿ ಜಲಾಯಶಗಳು ಅವಧಿಗೂ ಮೊದಲೇ ಭರ್ತಿಯಾಗಿರುವುದರಿಂದ ರಾಜ್ಯ ಸರ್ಕಾರವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲು ಚಿಂತಿಸಿದೆ ಎನ್ನಲಾಗಿದೆ.
Advertisement
ಸಾಧಾರಣ ಮಳೆ ವರ್ಷದಲ್ಲಿ ಹೆಚ್ಚುವರಿ ನೀರು ಬಳಕೆ ಸಂಬಂಧ ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಆದೇಶವಿಲ್ಲ. ಸಾಧಾರಣ ಮಳೆ ವರ್ಷದಲ್ಲಿ ಬಿಳಿಗುಂಡ್ಲುಗೆ 177.25 ಟಿಎಂಸಿ ನೀರು ತಲುಪಿದ ಬಳಿಕ ಸಿಗೋ ಹೆಚ್ಚುವರಿ ನೀರು ಬಳಕೆಗೆ ಸಂಬಂಧಿಸಿದಂತೆ ಇದೀಗ ಪ್ರಾಧಿಕಾರಕ್ಕೆ ಮನವಿ ಸಲ್ಲಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
Advertisement
Advertisement
ದಶಕಗಳ ಬಳಿಕ ಇದೀಗ ಅವಧಿಗೂ ಮುನ್ನವೇ ಕೆಆರ್‍ಎಸ್ ಜಲಾಶಯ ಭರ್ತಿಯಾಗಿದ್ದು, ಕನ್ನಡ ನಾಡಿನ ಜೀವನದಿ ಕಾವೇರಿ ಭೋರ್ಗರೆದು ಹರಿಯುತ್ತಿದ್ದಾಳೆ. ಬತ್ತಿ ಹೋಗಿದ್ದ ಕಾವೇರಿ ಕೊಳ್ಳದ ಭೂಮಿಯೀಗ ಹಸಿರಿನಿಂದ ಕಂಗೊಳಿಸುತ್ತಿದೆ. ಕೆಲ ವರ್ಷಗಳಿಂದ ಬರಿದಾಗಿದ್ದ ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರೀಕ್ಷೆಗೂ ಮೀರಿದ ಮಳೆ ಬಂದು ಜಿಲ್ಲೆಯ ಜೀವನಾಡಿ ಕೃಷ್ಣರಾಜ ಸಾಗರ ಅಣೆಕಟ್ಟು ಸಂಪೂರ್ಣ ಭರ್ತಿಯಾಗಿ ಜೀವನದಿ ಕಾವೇರಿ ಮೈದುಂಬಿ ಹರಿಯುತ್ತಿದ್ದಾಳೆ. ಅವಧಿಗೂ ಮುನ್ನವೇ ಕೆಆರ್‍ಎಸ್ ಭರ್ತಿಯಾಗಿರೋದ್ರಿಂದ ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಬಿಡಲಾಗಿದೆ. ವಾಡಿಕೆಯಂತೆ ಆಗಸ್ಟ್ ನಲ್ಲಿ ಕೆಆರ್‍ಎಸ್ ತುಂಬುವುದು. ಆದರೆ ಈ ಬಾರಿ ಒಂದು ತಿಂಗಳ ಮುಂಚಿತವಾಗಿ ಅಂದರೆ ಜುಲೈ ತಿಂಗಳಲ್ಲಿಯೇ ಅಣೆಕಟ್ಟು ಭರ್ತಿಯಾಗಿದೆ.