Dakshina KannadaDistrictsKarnatakaLatestMain Post

ಸಚಿವ ರಮಾನಾಥ ರೈ ಮಾತು ತಪ್ಪಿದ್ರೆ ಟಾರ್ಗೆಟ್ ಗ್ಯಾರಂಟಿ- ಆರೇ ತಿಂಗಳಲ್ಲಿ ಎಸ್‍ಪಿ ಸುಧೀರ್ ರೆಡ್ಡಿ ಎತ್ತಂಗಡಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೇಸ್ ನವರು ಮಾತ್ರವಲ್ಲ ಜಿಲ್ಲೆಯ ಎಲ್ಲಾ ಅಧಿಕಾರಿಗಳಿಗೂ ಉಸ್ತುವಾರಿ ಸಚಿವ ರಮಾನಾಥ ರೈ ಅವರೇ ಹೈಕಮಾಂಡ್. ಜಿಲ್ಲೆಯ ಕಾಂಗ್ರೇಸ್ಸಿಗರು ಹಾಗೂ ಎಲ್ಲಾ ಅಧಿಕಾರಿಗಳು ಸಚಿವ ರಮಾನಾಥ ರೈ ಅವರ ಮಾತು ತಪ್ಪಿದರೆ ಟಾರ್ಗೆಟ್ ಗ್ಯಾರಂಟಿ. ಇದಕ್ಕೆ ಜೀವಂತ ಸಾಕ್ಷಿ ಕೇವಲ ಆರು ತಿಂಗಳಲ್ಲಿ ಇಬ್ಬರು ಎಸ್‍ಪಿಗಳ ವರ್ಗಾವಣೆ.

ಹೌದು. ರೈ ಅವರ ಸ್ವ-ಕ್ಷೇತ್ರ ಬಂಟ್ವಾಳದಲ್ಲಿ ಕಳೆದ ಮೇ ತಿಂಗಳಿನಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಸರಣಿ ಹತ್ಯೆಗಳು ನಡೆದಿದ್ದವು. ಕೋಮುಗಲಭೆಯೂ ನಡೆದು ಹೋಗಿತ್ತು. ಇದಕ್ಕೆಲ್ಲಾ ಉಸ್ತುವಾರಿ ಸಚಿವರು ಪೊಲೀಸ್ ಅಧಿಕಾರಿಗಳ ಕರ್ತವ್ಯಕ್ಕೆ ಮೂಗು ತೂರಿಸುತ್ತಿರೋದೇ ಕಾರಣ ಎಂದು ಜನ ಆಡಿಕೊಳ್ಳುತ್ತಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ ಬಂಟ್ವಾಳದ ಐಬಿಯಲ್ಲಿ ಅಂದಿನ ಜಿಲ್ಲಾ ಎಸ್‍ಪಿ ಭೂಷಣ್ ರಾವ್ ಬೋರಸೆಯನ್ನು ಕಾಂಗ್ರೆಸ್ ಕಾರ್ಯಕರ್ತರ ಎದುರೇ ಹಿಗ್ಗಾ ಮುಗ್ಗ ಬೈದಿದ್ದ ವಿಡಿಯೋ ವೈರಲ್ ಆಗಿತ್ತು. ಇದರಿಂದ ಮುಜುಗರಕ್ಕೊಳಗಾದ ಸಚಿವ ರೈ ಅವರು ಎಸ್‍ಪಿ ಬೋರಸೆಯನ್ನು 2017ರ ಜೂನ್ 21 ರಂದು ವರ್ಗಾವಣೆ ಮಾಡಿಸಿದ್ದರು.

ಎಸ್‍ಪಿ ಭೂಷಣ್ ರಾವ್ ಬೋರಸೆಯವರ ವರ್ಗಾವಣೆ ಬಳಿಕ ಮಂಡ್ಯದ ಎಸ್‍ಪಿಯಾಗಿದ್ದ, ದಕ್ಷ ಅಧಿಕಾರಿಯೆಂದು ಹೆಸರು ಮಾಡಿದ್ದ ಸುಧೀರ್ ಕುಮಾರ್ ರೆಡ್ಡಿಯನ್ನು ದಕ್ಷಿಣ ಕನ್ನಡ ಎಸ್‍ಪಿಯಾಗಿ ನಿಯೋಜಿಸಲಾಗಿತ್ತು. ಆದರೆ ನೇಮಕಗೊಂಡ ಆರೇ ತಿಂಗಳಲ್ಲಿ ಎಸ್‍ಪಿ ಸುಧೀರ್ ರೆಡ್ಡಿಯನ್ನು ಎತ್ತಂಗಡಿ ಮಾಡಲಾಗಿದೆ. ಸಚಿವ ರೈ ಸತತ ಪ್ರಯತ್ನದ ಮೂಲಕ ಕೊನೆಗೂ ವರ್ಗಾವಣೆ ಮಾಡಿ ಯಶಸ್ವಿಯಾಗಿದ್ದಾರೆ. ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣದಲ್ಲಿ ಯಾರ ಮುಲಾಜಿಗೂ ಒಳಗಾಗದೆ ರೈ ಮಾತೂ ಕೇಳದೆ ಆರೋಪಿಗಳನ್ನು ಬಂಧಿಸಿದ್ದು, ಕೋಮು ಗಲಭೆಗೆ ಅವಕಾಶ ನೀಡದೆ ರಫ್ ಅಂಡ್ ಟಫ್ ಆಗಿ ವರ್ತಿಸಿರುವುದಕ್ಕೆ ಸುಧೀರ್ ರೆಡ್ಡಿಯನ್ನು ವರ್ಗ ಮಾಡಿಸಲಾಗಿದೆ ಅನ್ನೋ ಮಾತು ಕೇಳಿಬಂದಿದೆ.

ಎಸ್‍ಡಿಪಿಐ ಮುಖಂಡ ಅಶ್ರಫ್ ಕಲಾಯಿ, ಆರ್ ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆಯ ಬಳಿಕ ನಡೆದ ಕೋಮುಗಲಭೆಗಳು ಎಸ್‍ಪಿ ರೆಡ್ಡಿ ಬಂದ ಬಳಿಕ ಎರಡೇ ವಾರದಲ್ಲಿ ಕಂಟ್ರೋಲ್‍ಗೆ ತಂದಿದ್ರು. ಆ ಬಳಿಕ ಯಾವುದೇ ಘಟನೆಗಳು ನಡೆಯದಂತೆಯೂ ನೋಡಿಕೊಂಡಿದ್ದರು. ಆದರೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರ ಹಸ್ತಕ್ಷೇಪಕ್ಕೆ ರೆಡ್ಡಿ ಸೊಪ್ಪು ಹಾಕುತ್ತಿರಲಿಲ್ಲ. ರೆಡ್ಡಿ ಇರೋವರೆಗೂ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗೋ ರೈ ಆಪ್ತರನ್ನು ರಕ್ಷಿಸಲು ಸಾಧ್ಯವಿಲ್ಲ. ಹೀಗಾಗಿಯೇ ಮುಖ್ಯಮಂತ್ರಿಗಳಿಂದ ಒತ್ತಡ ತಂದು ಎಸ್‍ಪಿ ರೆಡ್ಡಿಯವರನ್ನು ವರ್ಗಾವಣೆ ಮಾಡಲಾಗಿದೆ ಎಂಬ ಮಾತುಗಳು ಕೇಳಿಬಂದಿದೆ.

ಚುನಾವಣೆ ಹತ್ತಿರ ಬರುವಾಗ ಸಚಿವರು ಈ ಜಿಲ್ಲೆಯಲ್ಲಿ ತನಗೆ ಬೇಕಾದ ಅಧಿಕಾರಿಗಳನ್ನು ನಿಯೋಜನೆ ಮಾಡಲು ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದಾರೆ. ಸಚಿವರ ಸ್ವಾರ್ಥಕ್ಕಾಗಿ ದಕ್ಷ ಅಧಿಕಾರಿಗಳಿಗೆ ಈ ಜಿಲ್ಲೆಯಲ್ಲಿ ಉಳಿಗಾಲವಿಲ್ಲದಂತಾಗಿದೆ. ರಾಜಕಾರಣಿಗಳ ಇಂತಹ ಕೆಲಸಗಳಿಂದಾಗಿ ಜಿಲ್ಲೆಯಲ್ಲಿ ಮತ್ತೆ ಶಾಂತಿ ಸುವ್ಯವಸ್ಥೆ ಹಾಳಾಗುತ್ತಾ ಅನ್ನುವ ಭೀತಿ ಜಿಲ್ಲೆಯ ಜನರಲ್ಲಿ ಆರಂಭಗೊಂಡಿದೆ.

Leave a Reply

Your email address will not be published.

Back to top button