– ಕಟೀಲ್‌ಗೆ ಕೊಕ್, ಕ್ಯಾ. ಬ್ರಿಜೇಶ್ ಚೌಟಗೆ ಟಿಕೆಟ್
– ‘ಕೈ’ ಟಿಕೆಟ್ ಇನ್ನೂ ಕಗ್ಗಂಟು
ಹಿಂದುತ್ವದ ನೆಲೆ, ಬಿಜೆಪಿ ಭದ್ರಕೋಟೆ ದಕ್ಷಿಣ ಕನ್ನಡ ಜಿಲ್ಲೆ. ‘ಲೋಕ’ಸಮರದ ಕಳೆದ ಮೂರು ಚುನಾವಣೆಯಲ್ಲಿ ಜನ ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಆರು ಕಡೆ ಕಮಲ ಅರಳಿದೆ. ಎರಡು ಕ್ಷೇತ್ರದ ಜನ ಕೈ ಪಕ್ಷವನ್ನು ಹಿಡಿದಿದ್ದಾರೆ.
Advertisement
ಮೋದಿ ಹೆಸರಿನ ಬಲ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಇದೆಲ್ಲವೂ ಹಿಂದುತ್ವದ ಅಲೆ ಇರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಗೆ ವರದಾನವಾಗಿದೆ. ಇತ್ತ ಕಾಂಗ್ರೆಸ್ ಗ್ಯಾರಂಟಿಗಳನ್ನು ರಾಜ್ಯದಲ್ಲಿ ಅನುಷ್ಠಾನ ಮಾಡಿದೆ. ಗ್ಯಾರೆಂಟಿಗಳ ಲಾಭ ಪಡೆದುಕೊಳ್ಳುತ್ತಿರುವ ಮತದಾರರು ಕಾಂಗ್ರೆಸ್ಸಿಗೆ ಮತ ಹಾಕುತ್ತಾರೆ ಎಂಬ ವಿಶ್ವಾಸದಲ್ಲಿದೆ. ಇನ್ನು ಜಾತಿ ಲೆಕ್ಕಾಚಾರದಲ್ಲಿ ನೋಡುವುದಾದರೆ, ಜಿಲ್ಲೆಯಲ್ಲಿ ಬಂಟ, ಬಿಲ್ಲವ ಮತಗಳೇ ನಿರ್ಣಾಯಕ. ಅದರ ಜೊತೆ ಮೊಗವೀರ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮುಸ್ಲಿಂ ಮತಗಳು ಕೂಡ ಗೆಲುವಿನ ಮೆಟ್ಟಿಲನ್ನು ಸುಲಭ ಮಾಡಲು ಬೇಕೇ ಬೇಕು.
Advertisement
ಕ್ಷೇತ್ರ ಪರಿಚಯ
ದಕ್ಷಿಣ ಕನ್ನಡ ಮೊದಲು ಮಂಗಳೂರು ಲೋಕಸಭಾ ಕ್ಷೇತ್ರದ ಭಾಗವಾಗಿತ್ತು. 1950 ರ ದಶಕದಿಂದ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸತತ ಗೆಲುವಿನ ಸರಪಳಿಯು 1991 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿ.ಧನಂಜಯ ಕುಮಾರ್ ಅವರ ಗೆಲುವಿನೊಂದಿಗೆ ಕಳಚಿತ್ತು. ಅಲ್ಲಿಂದ ಸತತ ಎಂಟು ಚುನಾವಣೆಗಳಲ್ಲೂ ಇಲ್ಲಿ ಬಿಜೆಪಿಯದ್ದೇ ಪಾರುಪತ್ಯ. 2004 ರಲ್ಲಿ ಬಿಜೆಪಿ ಡಿ.ವಿ.ಸದಾನಂದ ಗೌಡರಿಗೆ ಟಿಕೆಟ್ ನೀಡಿ ಗೆಲುವಿನ ಓಟವನ್ನು ಮುಂದುವರಿಸಿತು. 2009 ರಲ್ಲಿ ಗೌಡರ ವಿರುದ್ಧ ಪಕ್ಷದ ವಲಯದಲ್ಲಿ ಅಸಮಾಧಾನ ವ್ಯಕ್ತವಾದಾಗ, ಸಂಘ ಪರಿವಾರದ ಹಿನ್ನೆಲೆಯ ನಳಿನ್ ಕುಮಾರ್ ಕಟೀಲ್‌ಗೆ ಪಕ್ಷ ಮಣೆ ಹಾಕಿತು. ಸತತ ಮೂರು ಬಾರಿ ಕಟೀಲ್ ಸಂಸದರಾಗಿ ಆಯ್ಕೆಯಾದರು.
Advertisement
ವಿಧಾನಸಭಾ ಕ್ಷೇತ್ರಗಳೆಷ್ಟು?
ಕ್ಷೇತ್ರವು ಒಟ್ಟು 7 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಮಂಗಳೂರು ದಕ್ಷಿಣ (ವೇದವ್ಯಾಸ ಕಾಮತ್-ಬಿಜೆಪಿ), ಮಂಗಳೂರು ಉತ್ತರ (ಭರತ್ ಶೆಟ್ಟಿ-ಬಿಜೆಪಿ), ಬಂಟ್ವಾಳ (ರಾಜೇಶ್ ನಾಯಕ್-ಬಿಜೆಪಿ), ಬೆಳ್ತಂಗಡಿ (ಹರೀಶ್ ಪೂಂಜಾ-ಬಿಜೆಪಿ), ಸುಳ್ಯ (ಭಾಗೀರಥಿ ಮುರುಳ್ಯಾ-ಬಿಜೆಪಿ), ಪುತ್ತೂರು (ಅಶೋಕ್ ರೈ-ಕಾಂಗ್ರೆಸ್), ಉಳ್ಳಾಲ (ಯು.ಟಿ.ಖಾದರ್-ಕಾಂಗ್ರೆಸ್).
Advertisement
ಒಟ್ಟು ಮತದಾರರ ಸಂಖ್ಯೆ
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 17,96,303 ಮತದಾರರಿದ್ದಾರೆ. ಅವರ ಪೈಕಿ 8,76,957 ಪುರುಷರು ಮತ್ತು 9,19,279 ಮಹಿಳಾ ಮತದಾರರಿದ್ದಾರೆ. 67 ತೃತೀಯಲಿಂಗಿ ಮತದಾರರು ಇದ್ದಾರೆ.
ಕಳೆದ ಚುನಾವಣೆಯಲ್ಲಿ ಏನಾಗಿತ್ತು?
2019 ರ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದರು. ಮಿಥುನ್ ರೈ ವಿರುದ್ಧ ಕಟೀಲ್ 2,74,621 ಲಕ್ಷ ಮತಗಳ ಅಂತರದ ಭರ್ಜರಿ ಗೆಲುವು ದಾಖಲಿಸಿದ್ದರು.
ಹ್ಯಾಟ್ರಿಕ್ ಸರದಾರ ಕಟೀಲ್‌ಗೆ ತಪ್ಪಿದ ಟಿಕೆಟ್
2022ರ ಜುಲೈನಲ್ಲಿ ಬೆಳ್ಳಾರೆಯಲ್ಲಿ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ನಡೆದ ಸಂದರ್ಭದಲ್ಲಿ ಕಟೀಲ್ ವಿರುದ್ಧ ಪಕ್ಷದ ಕಾರ್ಯಕರ್ತರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಈ ಬಾರಿ ಬಿಜೆಪಿಯಲ್ಲಿ ಹೊಸ ಮುಖಕ್ಕೆ ಅವಕಾಶ ಕೊಡಬೇಕು ಎಂಬ ಕೂಗು ಸಾಮಾಜಿಕ ಜಾಲತಾಣದಲ್ಲಿ ಎದ್ದಿತ್ತು. ಅದರ ಜೊತೆ ಪುತ್ತೂರಿನ ಅರುಣ್ ಪುತ್ತಿಲ ಬಿಜೆಗೆ ಬಂಡಾಯವಾಗಿ ನಿಂತಿದ್ದರಿಂದ ಪುತ್ತೂರು ವಿಧಾನಸಭಾ ಕ್ಷೇತ್ರವನ್ನು ಬಿಜೆಪಿ ಕಳೆದುಕೊಂಡಿತ್ತು. ಈ ಎಲ್ಲ ರಾಜಕೀಯ ಬೆಳವಣಿಗೆಯಿಂದಾಗಿ ಹೈಕಮಾಂಡ್ ಪಕ್ಷದ ರಾಜ್ಯ ಘಟಕದ ಕಾರ್ಯದರ್ಶಿ ಕ್ಯಾ. ಬ್ರಿಜೇಶ್ ಚೌಟ ಅವರಿಗೆ ಟಿಕೆಟ್ ನೀಡಿದೆ. ಅರುಣ್ ಪುತ್ತಿಲ ಬಣದ ವಿರೋಧ ಇದ್ದದ್ದು ನಳಿನ್ ಸ್ಪರ್ಧೆಗೆ ಮಾತ್ರ. ಹೀಗಾಗಿ ಹೊಸ ಅಭ್ಯರ್ಥಿಗೆ ಪಕ್ಷ ಮಣೆ ಹಾಕಿತು.
ಬಹುಸಂಖ್ಯಾತರಿರೋ ಬಿಲ್ಲವರಿಗೆ ಮಣೆ ಹಾಕುತ್ತಾ ಕಾಂಗ್ರೆಸ್?
1991 ರ ಬಳಿಕ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಗೆಲುವು ಮರೀಚಿಕೆಯಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನು ಗೆದ್ದರೂ ಕಾಂಗ್ರೆಸ್‌ಗೆ ದಕ್ಷಿಣ ಕನ್ನಡ ಜಿಲ್ಲೆಯ ಫಲಿತಾಂಶ ನಿರಾಸೆ ಮೂಡಿಸಿತ್ತು. ಎಂಟರಲ್ಲಿ ಎರಡು ಕ್ಷೇತ್ರಗಳಲ್ಲಿ ಮಾತ್ರ ಪಕ್ಷ ಗೆದ್ದಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗತ ವೈಭವ ಮರಳಿ ಪಡೆಯಬೇಕೆಂದು ಪಕ್ಷದ ಮುಖಂಡರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದಲ್ಲಿ ಪ್ರಾಬಲ್ಯ ಹೊಂದಿರುವ ಬಿಲ್ಲವ ಸಮುದಾಯದವರಿಗೆ ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡಲು ಕಾಂಗ್ರೆಸ್ ಮುಂದಾಗಿದೆ. ವಿನಯ್ ಕುಮಾರ್ ಸೊರಕೆ (ಬಿಲ್ಲವ), ಬಿ.ಕೆ.ಹರಿಪ್ರಸಾದ್ (ಬಿಲ್ಲವ), ಆರ್.ಪದ್ಮರಾಜ್ (ಬಿಲ್ಲವ) ಟಿಕೆಟ್ ಆಕಾಂಕ್ಷಿಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಯು.ಟಿ.ಇಫ್ತಿಕಾರ್ (ಮುಸ್ಲಿಂ) ಕೂಡ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಪಕ್ಷವು ಯಾರಿಗೆ ಮಣೆ ಹಾಕುತ್ತೆ ಎಂಬುದು ಕುತೂಹಲ ಮೂಡಿಸಿದೆ.
ಬಿಜೆಪಿ ಪ್ಲಸ್: ಹಿಂದುತ್ವದ ಭದ್ರಕೋಟೆ, ಮೋದಿ ಪರವಾದ ಅಲೆ, ಅಯೋಧ್ಯೆಯ ರಾಮಮಂದಿರ, ಹಿಂದೂ ಮತ ನಿರ್ಣಾಯಕ, ತಳಮಟ್ಟದ ಕಾರ್ಯಕರ್ತರ ಶ್ರಮ.
ಕಾಂಗ್ರೆಸ್ ಪ್ಲಸ್: ಗ್ಯಾರಂಟಿ ಯೋಜನೆಗಳ ಲಾಭದ ನಿರೀಕ್ಷೆ, ಮುಸ್ಲಿಂ ಮತಗಳ ಕ್ರೋಢಿಕರಣ, ಹದಿನೈದು ವರ್ಷದಲ್ಲಿ ಅಭಿವೃದ್ಧಿ ಆಗದ ವಿಚಾರ ಚುನಾವಣಾ ಅಸ್ತ್ರ, ಸಾಫ್ಟ್ ಹಿಂದುತ್ವ ಧೋರಣೆ.
ಜಾತಿವಾರು ಲೆಕ್ಕಾಚಾರ
ಬಿಲ್ಲವ- 3.60 ಲಕ್ಷ
ಮುಸ್ಲಿಂ- 3.50 ಲಕ್ಷ
ಎಸ್ಸಿ/ಎಸ್‌ಟಿ- 2.80 ಲಕ್ಷ
ಗೌಡ- 2 ಲಕ್ಷ
ಬಂಟ್ಸ್- 1.25 ಲಕ್ಷ
ಕ್ರಿಶ್ಚಿಯನ್- 1 ಲಕ್ಷ
ಬ್ರಾಹ್ಮಣ- 1 ಲಕ್ಷ
ಕೊಂಕಣಿ- 1 ಲಕ್ಷ
ಇತರ- 3.50 ಲಕ್ಷ