Connect with us

Crime

1 ಲಕ್ಷ ರೂ. ಮೌಲ್ಯದ ಹಸುಗಳ ಕಳ್ಳತನ- ಕೆಲವೇ ಗಂಟೆಯಲ್ಲಿ ಕಳ್ಳರನ್ನ ಬಂಧಿಸಿದ ಪೊಲೀಸರು

Published

on

ಮಂಗಳೂರು: ರಾಜ್ಯದ ಕರಾವಳಿಯಲ್ಲಿ ಗೋವು ಕಳ್ಳತನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇಂದೂ ಕೂಡ ಬರೋಬ್ಬರಿ ಒಂದು ಲಕ್ಷ ರೂ. ಮೌಲ್ಯದ ಹಸುಗಳನ್ನು ಕದ್ದು ಸಾಗಿಸುತ್ತಿದ್ದ ಮೂವರನ್ನು ಪೊಲೀಸರು ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಬಂಧಿಸಿ, ಗೋವುಗಳನ್ನು ರಕ್ಷಣೆ ಮಾಡಿದ್ದಾರೆ.

ಮೂಡುಬಿದ್ರೆಯ ಗಂಟಲ್ ಕಟ್ಟೆ ನಿವಾಸಿ ಶಾಫಿ ಅಲಿಯಾಸ್ ಕಲಂದರ್ ಶಾಫಿ (28), ದಬ್ಬೇಲಿ ಲಚ್ಚಿಲ್ ಮನೆ ನಿವಾಸಿ ಸಾಧಿಕ್ ಅಲಿಯಾಸ್ ಮೊಹಮ್ಮದ್ ಸಾಧಿಕ್ (30), ಬಂಟ್ವಾಳ ನರಿಂಗಾನ ಗ್ರಾಮ ನಿವಾಸಿ ಆಸಿಫ್ ಅಲಿಯಾಸ್ ಮೊಹಮ್ಮದ್ ಕಲಂದರ್ (24) ಬಂಧಿತ ಆರೋಪಿಗಳು.

ಮಂಗಳೂರಿನ ಕೋಣಾಜೆ ಸಮೀಪದ ಎಲಿಯಾರ್ ಪದವು ಎಂಬಲ್ಲಿ ದನಕಳ್ಳರು ಹಸುಗಳನ್ನು ಕದ್ದು ಓಮ್ನಿ ಕಾರಿನಲ್ಲಿ ಸಾಗಿಸುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಸ್ಥಳೀಯರು ಕೊಣಾಜೆ ಪೊಲೀಸರಿಗೆ ನೀಡಿದ್ದರು. ತಕ್ಷಣ ಕಾರ್ಯಾಚರಣೆಗೆ ಇಳಿದ ಪೊಲೀಸರು ಓಮ್ನಿ ಕಾರನ್ನು ಬೆನ್ನಟ್ಟಿದ್ದರು. ಆದರೆ ಆರೋಪಿಗಳು ಪರಾರಿಯಾಗಲು ಯತ್ನಿಸಿ ಕೊನೆಗೆ ಸಿಕ್ಕಿಬಿದ್ದಿದ್ದಾರೆ. ಓಮ್ನಿಯಲ್ಲಿದ್ದ ಸುಮಾರು ಒಂದು ಲಕ್ಷ ರೂ. ಮೌಲ್ಯದ ನಾಲ್ಕು ದನಗಳನ್ನು ವಶಪಡಿಸಿಕೊಂಡ ಪೊಲೀಸರು, ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರನ್ನು ಬಂಧಿಸಿದ್ದಾರೆ.

ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಓಮ್ನಿ ಕಾರು ಸೇರಿದಂತೆ ಒಟ್ಟು 2.10 ಲಕ್ಷ ರೂ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ಇತರ ಆರೋಪಿಗಳ ಪತ್ತೆ ಕಾರ್ಯವನ್ನು ಮುಂದುವರಿಸಿದ್ದಾರೆ.

ಈ ಕಾರ್ಯಾಚರಣೆಯನ್ನು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ಅವರ ನಿರ್ದೇಶನದಲ್ಲಿ ನಡೆಸಲಾಗಿದ್ದು, ಪೊಲೀಸ್ ಉಪ ಆಯುಕ್ತರು ಅರುಣಾಂಗ್ಶ್ಯು ಗಿರಿ ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಪೊಲೀಸ್ ಉಪ ಆಯುಕ್ತರು ಲಕ್ಷ್ಮೀ ಗಣೇಶ್ ಅವರ ಮಾರ್ಗದರ್ಶನದಲ್ಲಿ ದಕ್ಷಿಣ ಉಪ ವಿಭಾಗದ ಎಸಿಪಿ ಕೋದಂಡರಾಮ್‍ರವರ ನಿರ್ದೇಶನದಲ್ಲಿ, ಕೊಣಾಜೆ ಪೊಲೀಸ್ ನಿರೀಕ್ಷಕರಾದ ಯೋಗೀಶ್ವರನ್, ಪ್ರೊ.ಪಿ.ಎಸ್.ಐ. ಶರಣಪ್ಪ ಭಂಡಾರಿ, ಪ್ರೊ. ಪಿ.ಎಸ್.ಐ ಶಿವಕುಮಾರ, ಜಗನ್ನಾಥ್, ಅಶೋಕ್ ಕುಮಾರ್, ನಾಗರಾಜ್, ವಿಜಯ್ ಕುಮಾರ್, ಚಂದ್ರಕಾಂತ್, ರಾಜು ಹರನಾಲ್, ಮಂಜುನಾಥ್ ಹಾಗೂ ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹ ದಳದ ಸಿಬ್ಬಂದಿ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

Click to comment

Leave a Reply

Your email address will not be published. Required fields are marked *