ಮಂಗಳೂರು: ದೈವದ ಮುಕ್ಕಾಲ್ದಿ (ಪಾತ್ರಿ) ವಿರುದ್ಧ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಕೆಲಕಾಲ ದೇವರ ಬಲಿ ಉತ್ಸವ ಸ್ಥಗಿತಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಇರುವೈಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ನಡೆದಿದೆ.
ವರ್ಷಾವಧಿ ಜಾತ್ರೆಯಲ್ಲಿ ದೇವರ ಬಲಿ ಉತ್ಸವ ನಡೆಯುವ ವೇಳೆ ದೇವರ ಪಾತ್ರಿ ಹಾಗೂ ಹೊಸಮರಾಯ ದೈವದ ಮುಕ್ಕಾಲ್ದಿ ಭೇಟಿಯಾಗುವುದು ಇಲ್ಲಿನ ಸಂಪ್ರದಾಯ. ಕಳೆದ ಬಾರಿ ನಡೆದ ಉತ್ಸವದ ವೇಳೆ ಹೊಸಮಾರಾಯ ದೈವದ ಮುಕ್ಕಾಲ್ದಿಯಾಗಿದ್ದ ನವೀನ್ ಶೆಟ್ಟಿ ಎಂಬವರು ಮುಂದಿನ ಉತ್ಸವದಲ್ಲಿ ಸೇವೆ ಸಲ್ಲಿಸುವುದಿಲ್ಲ ಎಂದು ಮುಕ್ಕಾದ್ದಿಯಾಗಿ ತೊಟ್ಟಿದ್ದ ಆಭರಣಗಳನ್ನು ದೈವದ ಮುಂದಿಟ್ಟು ತೆರಳಿದ್ದರು. ಆದರೆ ಈ ಬಾರಿಯ ಉತ್ಸವದಲ್ಲಿ ಊರಿನ ಭಕ್ತರು ಹಾಗೂ ದೇವಸ್ಥಾನದ ಅಡಳಿತ ಮಂಡಳಿಯ ಜೊತೆಗೆ ಬೇರೊಬ್ಬ ಮುಕ್ಕಾಲ್ದಿ ನೇಮಿಸಲು ಸಭೆ ನಡೆಸಿದ್ದರು.
ಈ ಬಾರಿಯ ಉತ್ಸವದ ಪಂಚಾದಿವಟೀಕೆ ಚೆಂಡೆ ಸುತ್ತು ವೇಳೆ ನವೀನ್ ಶೆಟ್ಟಿ ಅವರೇ ಹೊಸಮಾರಾಯ ದೈವದ ಮುಕ್ಕಾಲ್ದಿಯಾಗಿದ್ದನ್ನು ಕಂಡ ಕೆಲವು ಭಕ್ತರು ಅಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಕೆಲವು ಹೊತ್ತು ಗೊಂದಲ ಉಂಟಾಗಿದ್ದು ಪೊಲೀಸರು ಮಧ್ಯೆ ಪ್ರವೇಶಿಸಿ ದೇವರ ಉತ್ಸವಕ್ಕೆ ತೊಂದರೆಯಾಗದಂತೆ ಧ್ವನಿವರ್ಧಕ ಮೂಲಕ ಭಕ್ತರಲ್ಲಿ ಮನವಿ ಮಾಡಿ ಸಮಸ್ಯೆ ಬಗೆಹರಿಸಲು ಮುಂದಾದರು.