ಮಂಗಳೂರು: ಬಾಲಿವುಡ್ ಖ್ಯಾತ ನಟಿ, ಕುಡ್ಲದ ಕುವರಿ ಶಿಲ್ಪಾ ಶೆಟ್ಟಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಖ್ಯಾತ ಕಟೀಲು ದೇವಸ್ಥಾನಕ್ಕೆ ಗುರುವಾರ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಖಾಸಗಿ ಕಾರ್ಯಕ್ರಮದ ನಿಮಿತ್ತ ಮಂಗಳೂರಿಗೆ ಆಗಮಿಸಿದ್ದ ಶಿಲ್ಪಾ ಶೆಟ್ಟಿ ಕಟೀಲು ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವಸ್ಥಾನದ ಪ್ರಧಾನ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಅವರು ಶಿಲ್ಪಾ ಶೆಟ್ಟಿ ಅವರಿಗೆ ದೇವರ ಶೇಷವಸ್ತ್ರ ನೀಡಿ ಗೌರವಿಸಿದರು. ಜೊತೆಗೆ ಮುಂದಿನ ವರ್ಷ ಜನವರಿಯಲ್ಲಿ ನಡೆಯುವ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಬರುವಂತೆ ಕೋರಿ, ಆಮಂತ್ರಣ ಪತ್ರಿಕೆಯನ್ನು ನೀಡಿದರು.
ಆಮಂತ್ರಣ ಹಾಗೂ ವಿಶೇಷ ಗೌರವವನ್ನು ಸ್ವೀಕರಿಸಿದ ಶಿಲ್ಪಾ ಶೆಟ್ಟಿ ಅವರು, ಬ್ರಹ್ಮಕಲಶೋತ್ಸವಕ್ಕೆ ಬರುವುದಾಗಿ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಮಂಗಳೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಗರ್ಭಿಣಿಯರ ಆರೋಗ್ಯದ ಬಗ್ಗೆ ಮಾತನಾಡಿ, ತಮ್ಮ ತಾಯ್ತನದ ಗುಟ್ಟನ್ನೂ ಹಂಚಿಕೊಂಡಿದ್ದಾರೆ. ತಾಯ್ನುಡಿ ತುಳುವಿನಲ್ಲಿಯೇ ಮಾತು ಆರಂಭಿಸಿ, ಮಂಗಳೂರಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ತಮ್ಮ ಮೊದಲ ಬಾಣಂತನ ತುಂಬ ಕಷ್ಟಕರವಾಗಿತ್ತು ಎನ್ನುವುದನ್ನು ಹೇಳಿಕೊಂಡ ಶಿಲ್ಪಾ, ಮಹಿಳೆಯರು ಗರ್ಭ ಧರಿಸಿದ ಸಂದರ್ಭದಲ್ಲಿ ತಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡುವುದು ಮುಖ್ಯ. ಹುಟ್ಟುವ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರದಂತೆ ಜಾಗ್ರತೆ ವಹಿಸಬೇಕು ಅಂತ ಕಿವಿಮಾತು ಹೇಳಿದರು.
ಬಳಿಕ ಕಾರ್ಯಕ್ರಮದಲ್ಲಿ ಗರ್ಭಿಣಿಯರು ಮತ್ತು ಮಹಿಳೆಯರು ಕೇಳಿದ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿದರು. ಮಹಿಳೆಯರ ಆರೋಗ್ಯ ಮತ್ತು ಅಡುಗೆ ಬಗ್ಗೆ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ವಿಚಾರವನ್ನೂ ಹಂಚಿಕೊಂಡರು.