ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ದಾಡೇಲು ಎಂಬಲ್ಲಿ ಫಲ್ಗುಣಿ ನದಿಗೆ ವಿಷ ಹಾಕಿ ಸಾವಿರಾರು ಮೀನುಗಳ ಮಾರಣ ಹೋಮ ಮಾಡಿದ ಇಬ್ಬರನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.
ಮೂಡುಕೋಡಿಯ ಇರ್ಷಾದ್ ಹಾಗೂ ಮಹಮ್ಮದ್ ಹನೀಫ್ ಬಂಧಿತ ಆರೋಪಿಗಳು. ಕಿಡಿಗೇಡಿಗಳು ನದಿಗೆ ವಿಷ ಹಾಕಿದ ಪರಿಣಾಮ ಬೆಳ್ತಂಗಡಿಯ ವೇಣೂರು ಸಮೀಪದ ಮೂಡುಕೋಡಿ ಗ್ರಾಮದ ನಡ್ತಿಕಲ್ಲಿನ ದಾಡೇಲು ನದಿಯ ದಡದಲ್ಲಿ ರಾಶಿ ರಾಶಿ ಮೀನುಗಳು ಸತ್ತು ಬಿದ್ದು, ದುರ್ನಾತದಿಂದ ಆ ಪರಿಸರಕ್ಕೆ ಹೋಗದಂತಹ ಸ್ಥಿತಿ ನಿರ್ಮಾಣವಾಗಿತ್ತು.
Advertisement
Advertisement
ಪ್ರಾಣಿ ಪಕ್ಷಿಗಳು ಈ ವಿಷ ನೀರನ್ನೇ ಕುಡಿಯುತ್ತಿದ್ದು, ಅವುಗಳು ಕೂಡ ಸಾಯುವ ಸ್ಥಿತಿ ನಿರ್ಮಾಣವಾಗಿತ್ತು. ಅದೇ ರೀತಿ ಕೆಲವು ಹಕ್ಕಿಗಳು ಸತ್ತು ಬಿದ್ದಿರುವ ವಿಷಯುಕ್ತ ಮೀನುಗಳನ್ನು ತಿನ್ನುತ್ತಿದವು. ಈ ಕೆಲಸ ಯಾರೇ ಮಾಡಿರಲಿ ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಸ್ಥಳೀಯರು ಠಾಣೆಗೆ ದೂರು ನೀಡಿದ್ದರು. ಸರಿಯಾದ ಶಿಕ್ಷೆ ಆಗದೇ ಇದ್ದಲ್ಲಿ ಹೋರಾಟದ ಎಚ್ಚರಿಕೆಯನ್ನು ಸ್ಥಳೀಯರು ನೀಡಿದ್ದರು.
Advertisement
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬೆಳ್ತಂಗಡಿ ಪೊಲೀಸರು ತನಿಖೆ ಆರಂಭಿಸಿದ್ದರು. ಈ ವೇಳೆ ಇರ್ಷಾದ್ ಹಾಗೂ ಮಹಮ್ಮದ್ ಮೇಲೆ ಶಂಕೆ ವ್ಯಕ್ತಪಡಿಸಿ ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ.