– ಅಂಗವೈಕಲ್ಯತೆಯನ್ನು ಮೆಟ್ಟಿ ನಿಂತು ಯುವಕನ ಕೈಹಿಡಿದ ಸಂಜೀವಿನಿ
ಮಂಗಳೂರು: ಮದುವೆಯಾಗಬೇಕಾದ ಗಂಡು ಹಾಗಿರಬೇಕು, ಹೀಗಿರಬೇಕೆಂದು ಕನಸು ಕಾಣುವ ಹುಡುಗಿಯರೇ ಈಗಿನ ಕಾಲದಲ್ಲಿ ಹೆಚ್ಚು. ಅದರಲ್ಲೂ ಹುಡುಗ ಬಡವ, ಅಂಗವೈಕಲ್ಯತೆ ಇದೆ ಎಂದಾದರೆ ಅಂತಹ ಹುಡುಗನಿಗೆ ಮದುವೆ ಎನ್ನುವುದು ದೂರದ ಮಾತು. ಆದರೆ ಇದಕ್ಕೆಲ್ಲ ಭಿನ್ನವೆಂಬಂತೆ ಯುವತಿಯೊಬ್ಬರು ಎಲ್ಲರೂ ಮೆಚ್ಚುವಂತಹ ಕೆಲಸ ಮಾಡಿ ಈಗ ಸುದ್ದಿಯಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕಾಯರ್ತಡ್ಕ ಬಳಿಯ ಕಳೆಂಜ ಗ್ರಾಮದ ಯುವಕ ಚಂದ್ರಶೇಖರ್ ಅವರಿಗೆ ಕಾರ್ಕಳ ತಾಲೂಕಿನ ಮಾಳ ಗ್ರಾಮದ ಸಂಜೀವಿನಿ ಅವರ ಜೊತೆ ವರ್ಷದ ಹಿಂದೆ ಮದುವೆ ಮಾತುಕತೆ ನಡೆದಿತ್ತು. ಈ ವರ್ಷ ಮದುವೆ ಮಾಡಲು ಹಿರಿಯರು ತೀರ್ಮಾನಿಸಿದ್ದರು. ಆದರೆ ಟ್ಯಾಂಕರ್ ಕ್ಲೀನರ್ ಆಗಿದ್ದ ಚಂದ್ರಶೇಖರ್ ಅಂಕೋಲಾದಲ್ಲಿ ನಡೆದ ಅಪಘಾತದಲ್ಲಿ ತೀವ್ರ ಗಾಯಗೊಂಡು ಒಂದು ಕಾಲನ್ನೇ ಕಳಕೊಳ್ಳುವಂತಾಗಿತ್ತು. ಇದರಿಂದ ಹುಡುಗಿ ಮನೆಯವರು ಮದುವೆಗೆ ನಿರಾಕರಿಸಿದರೆ, ಇತ್ತ ತೀರಾ ಬಡತನದಲ್ಲಿದ್ದ ಹುಡುಗ ಮತ್ತು ವೃದ್ಧೆ ತಾಯಿ ನೊಂದು ಕೊಂಡಿದ್ದರು.
Advertisement
Advertisement
ಹುಡುಗಿ ಸಂಜೀವಿನಿ ಅಂಗವಿಕಲ ಹುಡುಗನನ್ನು ವರಿಸಲು ಒಪ್ಪಿದ್ದಲ್ಲದೆ, ಹಿಂದೂ ಸಂಘಟನೆಗಳ ಸಹಾಯ ಯಾಚಿಸಿದ್ದಾರೆ. ಸಂಜೀವಿನಿ ಅವರ ಮಾನವೀಯ ನಡೆಯನ್ನು ಮೆಚ್ಚಿದ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ನಾಯಕರು ತಾವೇ ಮುಂದೆ ನಿಂತು ಅದ್ದೂರಿಯಾಗಿ ಮದುವೆ ನೆರವೇರಿಸಿದ್ದಾರೆ.
Advertisement
ಕಾಯರ್ತಡ್ಕದ ಉಮಾಮಹೇಶ್ವರ ದೇವಸ್ಥಾನದಲ್ಲಿ ಇಂದು ಮದುವೆ ನಡೆದಿದ್ದು ಸ್ವಾಮೀಜಿಗಳು, ಧಾರ್ಮಿಕ ಮುಖಂಡರನ್ನು ಸೇರಿಸಿ ಸಮಾಜೋತ್ಸವ ರೂಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನರಿಗೆ ಊಟ ಹಾಕಿಸಿದ್ದಾರೆ. ಯುವಕನಲ್ಲಿ ಯಾವುದೇ ಊನ ಇದ್ದರೂ, ಈಗಿನ ಹುಡುಗಿಯರು ಮದುವೆಗೆ ನಿರಾಕರಿಸುತ್ತಾರೆ. ಹುಡುಗಿ ಮನೆಯವರೂ ಹುಡುಗ ಬಡವನಾದಲ್ಲಿ ಸಂಬಂಧವೇ ಬೇಡ ಎನ್ನುತ್ತಾರೆ. ಅಂತದ್ರಲ್ಲಿ ಸಂಜೀವಿನಿ ಮನೆಯವರು ಮದುವೆ ಬೇಡ ಎಂದರೂ ಕಾಲು ಕಳೆದುಕೊಂಡ ಹುಡುಗನನ್ನು ವರಿಸುವ ಮೂಲಕ ಮಾನವೀಯತೆ ಮೆರೆದು ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾರೆ. ಯುವತಿಯ ಈ ದಿಟ್ಟ ನಿರ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.