ಮಂಗಳೂರು: ಪುತ್ತೂರಿನ (Puttur) ಖಾಸಗಿ ಕಾಲೇಜೊಂದರಲ್ಲಿ ದಶಮಾನೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯೊಬ್ಬ ದೈವನರ್ತನ (Daiva Narthana) ಮಾಡಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.
ವೇದಿಕೆ ಮೇಲೆ ವಿದ್ಯಾರ್ಥಿಯೊಬ್ಬ ಜುಮಾದಿ ದೈವದ ವೇಷ ಧರಿಸಿ ನರ್ತನ ಮಾಡಿದ್ದಾನೆ. ಇದು ದೈವಾರಾಧಕರ ಅಸಮಾಧಾನಕ್ಕೆ ಕಾರಣವಾಗಿದೆ. ದೈವನರ್ತನದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದೈವಕ್ಕೆ ಅಪಮಾನ ಮಾಡಲಾಗಿದೆ ಎಂದು ಕಾಲೇಜಿನ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ.
ಸಿನಿಮಾಗಳಿಂದ ಯುವಕರು ಪ್ರೇರಣೆ ಪಡೆದು ಇಂತಹ ಕಾರ್ಯಕ್ಕೆ ಮುಂದಾಗಿದ್ದಾರೆ. ಇದು ಸರಿಯಾದ ನಡೆಯಲ್ಲ. ಈ ಹಿಂದೆ ಸಹ ಇಂತಹ ಘಟನೆಗಳು ನಡೆದಾಗ ಎಚ್ಚರಿಕೆ ನೀಡಲಾಗಿತ್ತು. ಆದರೂ ಸಹ ದೈವಗಳಿಗೆ ಅಪಮಾನ ಮಾಡುವುದು ಮುಂದುವರಿದಿದೆ. ಕಾಲೇಜಿನ ವಿರುದ್ಧ ದೂರು ಕೊಡುತ್ತೇವೆ ಎಂದು ದೈವಾರಾಧಕರು ಎಚ್ಚರಿಕೆ ನೀಡಿದ್ದಾರೆ.
ಸಿನಿಮಾ (Cinema) ಮತ್ತು ನಾಟಕಗಳಲ್ಲಿ (Drama) ದೈವಾರಾಧನೆಗೆ ಅಪಮಾನ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವಂತೆ ಇಲ್ಲಿನ ದೈವಾರಾಧಕರು ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ (Dakshina Kannada DC) ಮನವಿ ಸಲ್ಲಿಸಿದ್ದರು. ಮುಂದೆ ಸಿನಿಮಾಗಳಲ್ಲಿ ದೈವಾರಾಧನೆ ಪ್ರದರ್ಶನ ಆದ್ರೆ ನಮ್ಮ ಹೋರಾಟದ ಸ್ವರೂಪ ತೀವ್ರಗೊಳ್ಳುತ್ತದೆ. ದೈವಾರಾಧನೆಯು ಯಾವುದೇ ನಾಟಕ, ಸಿನಿಮಾ, ಧಾರವಾಹಿ, ಯಕ್ಷಗಾನದಲ್ಲೂ ಪ್ರದರ್ಶನ ಆಗಬಾರದು ಎಂದು ಆಗ್ರಹಿಸಿದ್ದರು. ಅದರ ಬೆನ್ನಲ್ಲೇ ಕಾಲೇಜಿನಲ್ಲಿ ದೈವನರ್ತನ ಪ್ರದರ್ಶನ ಮಾಡಿದ್ದು ಆಕ್ರೋಶಕ್ಕೆ ಕಾರಣವಾಗಿದೆ.