ಕನ್ನಡ ಚಿತ್ರ ಸೇರಿದಂತೆ ಸಲ್ಮಾನ್ ಖಾನ್ ಜೊತೆ ನಟಿಸಿದ್ದ ಬಹುಭಾಷಾ ನಟಿ ವಿವಾದಾತ್ಮಕ ಹೇಳಿಕೆಯೊಂದನ್ನ ಕೊಟ್ಟಿದ್ದಾರೆ. ಕನ್ನಡ ಚಿತ್ರಗಳ ಮೂಲಕವೇ ನಾಯಕಿಯಾಗಿ ಎಂಟ್ರಿ ಕೊಟ್ಟ ಈ ನಟಿ ಬಳಿಕ ಬಾಲಿವುಡ್‌ನಲ್ಲಿ ಸಲ್ಮಾನ್ ಖಾನ್ ಜೊತೆ ನಟಿಸಿದ್ದರು. ಅವರೇ ನಟಿ ಡೈಸಿ ಶಾ. ಇದೀಗ ಡೈಸಿ ಶಾ ದಕ್ಷಿಣ ಭಾರತದ ಚಿತ್ರರಂಗ ಹಾಗೂ ಕನ್ನಡ ಸಿನಿಮಾಗಳಲ್ಲಿ ನಾಯಕಿಯನ್ನ ಹೇಗೆ ಫೋಕಸ್ ಮಾಡಲಾಗುತ್ತದೆ ಅನ್ನೋದ್ರ ಕುರಿತು ವಿವಾದಾತ್ಮಕವಾಗಿ ಮಾತನಾಡಿದ್ದಾರೆ.
ಖಾಸಗಿ ಯೂಟ್ಯೂಬ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಡೈಸಿ ಶಾ ಸಂದರ್ಶಕರ ಜೊತೆ ಬಾಲಿವುಡ್ ಹಾಗೂ ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಯಲ್ಲಿ ನಾಯಕಿಯನ್ನ ತೋರಿಸುವ ವಿಧಾನದ ಕುರಿತು ಮಾತನಾಡುವ ವೇಳೆ ವಿಚಿತ್ರ ವಿಕ್ಷಿಪ್ತ ಹೇಳಿಕೆಯನ್ನ ಕೊಟ್ಟಿದ್ದಾರೆ. ಒಂದೆರಡು ಹಾಡನ್ನ ನೋಡಿರುವ ಮಾತ್ರಕ್ಕೆ ಇಡೀ ಕನ್ನಡ ಸಿನಿಮಾ ಇಂಡಸ್ಟ್ರಿಯ ಇತಿಹಾಸವನ್ನೇ ತಿರುಚುವ ಪ್ರಯತ್ನ ಮಾಡಿದ್ದಾರೆ ಈ ನಟಿ. ಬಹುಶಃ ಈ ವಿಚಾರ ಮುಂದಿನ ದಿನ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಚರ್ಚೆಯಾಗೋದ್ರಲ್ಲಿ ಅನುಮಾನವಿಲ್ಲ.
ಡೈಸಿ ಶಾ ಹೇಳಿದ್ದೇನು..?
ಕನ್ನಡ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾಗ, ಪುರುಷ ನಟರಿಗೆ ಸರಿಯಾದ ಹಿನ್ನೆಲೆ ಮತ್ತು ಉಪಪಠ್ಯದೊಂದಿಗೆ ನಿರ್ದೇಶನ ನೀಡಲಾಗುತ್ತಿತ್ತು. ಆದರೆ ನಾಯಕಿಯರಾದ ನಮಗೆ ಇಲ್ಲಿ ನಗಬೇಕು, ಇಲ್ಲಿ ಅಳಬೇಕು, ಇಲ್ಲಿ ಹೀಗಿರಬೇಕು ಎಂದಷ್ಟೇ ಹೇಳಲಾಗುತ್ತಿತ್ತು. ಭಾಷೆಯಲ್ಲಿ ಚೆನ್ನಾಗಿ ಪರಿಣತಿ ಇಲ್ಲದಿರುವುದು ಇದಕ್ಕೆ ಕಾರಣ ಇರಬಹುದು.
ನಟಿ ಹೇಳಿದ ವಿವಾದಾತ್ಮಕ ಮಾತೇನು..?
‘ನಾನು ಕನ್ನಡ ಸಿನಿಮಾದಲ್ಲಿ ಕೆಲಸ ಮಾಡುವಾಗ, ನನ್ನ ಬಿಡುವಿನ ಸಮಯದಲ್ಲಿ ನಾನು ಟಿವಿ ನೋಡುತ್ತಿದ್ದೆ. ಮತ್ತು ನಾನು ನೋಡಿದ ಎಲ್ಲಾ ಕನ್ನಡ ಹಾಡುಗಳಲ್ಲಿ… ಒಬ್ಬ ನಿರ್ದಿಷ್ಟ ನಟನಿದ್ದರು. ಅವರ ಎಲ್ಲಾ ಹಾಡುಗಳಲ್ಲಿ, ನಾಯಕಿಯ ಹೊಕ್ಕುಳಿನ ಮೇಲೆ ಹಣ್ಣಿನ ಸಲಾಡ್ ಅಥವಾ ತರಕಾರಿ ಸಲಾಡ್‌ನ್ನು ಕ್ಲೋಸ್-ಅಪ್ ಶಾಟ್‌ಗಳೊಂದಿಗೆ ಚಿತ್ರೀಕರಣ ಮಾಡಲಾಗುತ್ತಿತ್ತು. ಕೆಲವೊಮ್ಮೆ ಹೊಕ್ಕುಳಿನ ಮೇಲೆ ಐಸ್ ಅಥವಾ ನೀರನ್ನು ಸುರಿಯಲಾಗುತ್ತಿತ್ತು.’
ಹೀಗೆ ನಟಿ ಡೈಸಿ ಶಾ ಕನ್ನಡದ ಕೆಲವೇ ಹಾಡುಗಳನ್ನ ನೋಡಿ ಇಡೀ ಇಂಡಸ್ಟ್ರಿ ಮೇಲಿರುವ ಅಭಿಪ್ರಾಯವನ್ನ ಬೇರೆ ರೀತಿಯಲ್ಲಿ ಕೊಂಡೊಯ್ಯುವ ಪ್ರಯತ್ನ ಮಾಡಿರುವುದು ಕಾಣುತ್ತದೆ. ಕನ್ನಡ ಸಿನಿಮಾ ಇಂಡಸ್ಟ್ರಿಯ ಹಿರಿಮೆ ಪ್ರೌಢಿಮೆ ಇತಿಹಾಸವನ್ನ ಪ್ರಶ್ನೆ ಮಾಡುವಂತಿದೆ ಡೈಸಿ ಮಾತು. ಹಾಟರ್‌ಫ್ಲೈ ಯೂಟ್ಯೂಬ್ ವಾಹಿನಿಗೆ ಡೈಸಿ ಶಾ ನೀಡಿರುವ ಸಂದರ್ಶನದಲ್ಲಿ ವಿವಾದಾತ್ಮಕ ಮಾತನಾಡಿದ್ದಾರೆ.
ಅಂದಹಾಗೆ ಈ ಡೈಸಿ ಶಾ ಖ್ಯಾತ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಅವರ ಸಹಾಯಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಟನೆಗೆ ಕಾಲಿಡುವ ಮೊದಲು ಹಲವಾರು ಬಾಲಿವುಡ್ ಹಾಡುಗಳಲ್ಲಿ ಹಿನ್ನೆಲೆ ನರ್ತಕಿಯಾಗಿ ಕಾಣಿಸಿಕೊಂಡರು. ಬಳಿಕ ಮಹೇಶ್ ರಾವ್ ನಿರ್ದೇಶನದಲ್ಲಿ ಪ್ರಜ್ವಲ್ ದೇವರಾಜ್ ನಟನೆಯ ಭದ್ರ ಚಿತ್ರದ ಮೂಲಕ ನಟಿಯಾಗಿ ಭಡ್ತಿ ಪಡೆದವರು. ಬಳಿಕ ಜಗ್ಗೇಶ್ ಅಭಿನಯದ ಬಾಡಿಗಾರ್ಡ್ ಚಿತ್ರದಲ್ಲಿ ನಟಿಸಿದ್ದರು. ಬಳಿಕ ಸಲ್ಮಾನ್ ಖಾನ್ ಅವರ ಜೈ ಹೋ ಚಿತ್ರದಲ್ಲಿ ನಟಿಸುವ ಮೂಲಕ ಬಾಲಿವುಡ್ ನಟಿಯಾಗಿ ಖ್ಯಾತಿ ಪಡೆದಿದ್ರು. ಇದೀಗ ರಿಯಾಲಿಟಿ ಶೋ ಹೇಟ್‌ಸ್ಟೋರಿ ಸೇರಿದಂತೆ ಅಲ್ಲಿ ಇಲ್ಲಿ ಪಾತ್ರ ಮಾಡ್ತಿರುವ ಈ ಅವಕಾಶ ವಂಚಿತ ನಟಿ ತಮ್ಮ ಅಪ್ರಬುದ್ಧ ಹೇಳಿಕೆಯಿಂದ ಸುದ್ದಿಗೆ ಬಂದಿದ್ದಾರೆ.