ಹಾಲಿಗೆ ನೀರು ಬೆರೆಸಿ ಅಕ್ರಮ – ಕೆಲಸದಿಂದ ಸಿಬ್ಬಂದಿ ವಜಾ ಮಾಡಿದ ಚಿಮುಲ್

Public TV
1 Min Read
milk chikkaballapura

ಚಿಕ್ಕಬಳ್ಳಾಪುರ: ಡೈರಿಗಳ ಸಿಬ್ಬಂದಿ ಶುದ್ಧ ಹಾಲಿಗೆ ನೀರು ಮಿಶ್ರಣ ಮಾಡಿ ಹಾಲಿನ ಒಕ್ಕೂಟ ಹಾಗೂ ನಂದಿನಿ ಹಾಲಿನ ಗ್ರಾಹಕರಿಗೆ ವಂಚನೆ ಮಾಡುತ್ತಿರುವ ಪ್ರಕರಣ ಚಿಕ್ಕಬಳ್ಳಾಪುರದಲ್ಲಿ ಬಯಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಚಿಮುಲ್ ಮತ್ತೆ ಸುದ್ದಿಯಲ್ಲಿದೆ. ಚಿಮುಲ್‌ಗೆ ಸರಬರಾಜು ಮಾಡುವ ಪರಿಶುದ್ಧ ಹಸುವಿನ ಹಾಲಿಗೆ ನೀರು ಮಿಶ್ರಣ ಮಾಡಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

ಚಿಂತಾಮಣಿ ತಾಲೂಕಿನ ಮಾಡಿಕೆರೆ ಹಾಲಿನ ಡೈರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಾಲಿನ ಡಂಪ್ ಟ್ಯಾಂಕ್‌ಗೆ ನೀರು ಕಲಬೆರಕೆ ಮಾಡಿ, ಹಾಲಿನ ಟ್ಯಾಂಕ್ ಮೂಲಕ ಚಿಕ್ಕಬಳ್ಳಾಪುರ ಜಿಲ್ಲಾ ಡೈರಿಗೆ ಸರಬರಾಜು ಮಾಡಿ ಈಗ ಸಿಕ್ಕಿ ಬಿದ್ದಿದ್ದಾರೆ. ಸ್ವತಃ ಡೈರಿ ಸಿಬ್ಬಂದಿ ಕಳ್ಳಾಟವನ್ನು ಮತ್ತೋರ್ವ ಸಿಬ್ಬಂದಿ ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಮಾಡಿಕೆರೆ ಹಾಲಿನ ಡೈರಿ ಬಿಎಂಸಿ ಕೇಂದ್ರದಲ್ಲಿ ನಡೆದಿದೆ ಎನ್ನಲಾದ ಹಾಲಿನ ಮಿಶ್ರಣ ಅಕ್ರಮ ವಿಚಾರ ಬಯಲಾಗುತ್ತಿದ್ದಂತೆ ಸ್ವತಃ ಚಿಮುಲ್ ಎಂ.ಡಿ. ಶ್ರೀನಿವಾಸಗೌಡ ಅಲರ್ಟ್ ಆಗಿದ್ದಾರೆ. ಡೈರಿಯ ಸಹಾಯಕ ಚೇತನ್‌ನನ್ನು ಕೆಲಸದಿಂದ ವಜಾ ಮಾಡಿದ್ದಾರೆ. ಹಾಲಿನ ಟ್ಯಾಂಕರ್‌ನ ಚಾಲಕನ ಮಾರ್ಗ ಬದಲಾವಣೆ ಮಾಡಿ, ಹಾಲಿಗೆ ನೀರು ಮಿಶ್ರಣ ಕಳ್ಳಾಟ ತನಿಖೆಗೆ ಸಮಿತಿಯೊಂದನ್ನು ರಚಿಸಿದ್ದಾರೆ. ಅಕ್ರಮ ತಡೆಗಟ್ಟುವ ಭರವಸೆ ನೀಡಿದ್ದಾರೆ.

Share This Article