ಬೆಂಗಳೂರು: ರಾಜ್ಯದಲ್ಲಿ ದಿನಗೂಲಿ ಸರ್ಕಾರ ನಡೆಯುತ್ತಿದ್ದು, ಇವರಿಗೆ ಇವತ್ತಿಂದು ಇವತ್ತು ಮುಗಿದು ಹೋದ್ರೆ ಸಾಕಾಗಿದೆ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಆದರೆ ಸಿಎಂ ಕುಮಾರಸ್ವಾಮಿಯವರು ಇದಕ್ಕೂ ನನಗೂ ಸಂಬಂಧವಿಲ್ಲದಂತೆ ತೀರ್ಥ ಯಾತ್ರೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ದಿನಗೂಲಿ ಸರ್ಕಾರವಿದೆ. ಆದ್ದರಿಂದ ಅವರು ಇವತ್ತಿಂದು ಇವತ್ತು ಮುಗಿದು ಹೋದ್ರೆ ಸಾಕೆಂದು ಆಡಳಿತ ನಡೆಸುತ್ತಿದ್ದಾರೆ. ಅಲ್ಲದೇ ಒಂದೇ ವೇದಿಕೆಯಲ್ಲಿ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಯವರು ಮುಖನೋಡದ ಸ್ಥಿತಿಯಲ್ಲಿ ಇದ್ದಾರೆ. ಹೀಗಿರುವಾಗ ಇದು ಸರ್ಕಾರದ ಸಮನ್ವಯದ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಎಂದು ಕಿಡಿಕಾರಿದರು.
Advertisement
Advertisement
ಈ ಕೂಡಲೇ ಜನರ ರಕ್ಷಣೆಗೆ ಜಿಲ್ಲಾಧಿಕಾರಿಗಳು ಟೊಂಕ ಕಟ್ಟಿ ನಿಲ್ಲಬೇಕು. ಸಂತ್ರಸ್ತರ ನೆರವಿಗೆ ಸರ್ಕಾರ ಹಾಗೂ ಅಧಿಕಾರಿಗಳು ಬರಬೇಕು. ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಚುನಾವಣಾ ಆಯೋಗವು ಸಹ ಶಿವಮೊಗ್ಗ, ಮಂಗಳೂರು, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದೂಡಬೇಕು ಎಂದು ಹೇಳಿದರು.
Advertisement
ಮಾಜಿ ಪ್ರಧಾನಿ ಅಟಲ್ ಜೀ ಅವರ ಆರೋಗ್ಯ ಕುರಿತು ಪ್ರತಿಕ್ರಿಯಿಸಿ, ಮಾಜಿ ಪ್ರಧಾನಿ ಹಾಗೂ ಅಜಾತ ಶತ್ರು ಎಂದೇ ಕರೆಸಿಕೊಳ್ಳುವ ಅಟಲ್ ಬಿಹಾರಿ ವಾಜಪೇಯಿಯವರ ಆರೋಗ್ಯ ದಿನೇ ದಿನೇ ಕ್ಷೀಣಿಸುತ್ತಿದ್ದು, ಅವರ ಆರೋಗ್ಯದ ಬಗ್ಗೆ ನಾವೆಲ್ಲ ಚಿಂತೆಗೀಡಾಗಿದ್ದೇವೆ. ವಾಜಪೇಯಿಯವರು ನೂರು ವಸಂತಗಳನ್ನು ಪೂರೈಸಬೇಕು ಎನ್ನುವುದು ನಮ್ಮೆಲ್ಲರ ಆಶಯ. ದೇವರು ಅವರಿಗೆ ಆಯಸ್ಸು, ಆರೋಗ್ಯ ದಯಪಾಲಿಸಲಿ ಎಂದು ಪ್ರಾರ್ಥಿಸಿಕೊಳ್ಳುತ್ತೇನೆ ಎಂದರು.
Advertisement
ಇದೇ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ನವರು ಇಷ್ಟು ದಿನ ಬಿಜೆಪಿ ಅಧಿಕಾರಕ್ಕೆ ಬರಲು ಸರ್ಕಾರ ಬೀಳಿಸುತ್ತಿದ್ದಾರೆ ಎಂಬ ಆರೋಪವನ್ನು ಮಾಡಿದ್ದರು. ಈಗ ಅವರ 17 ಜನ ಶಾಸಕರುಗಳೇ ರಾಜೀನಾಮೆ ನೀಡುವ ಸ್ಥಿತಿಯಲ್ಲಿ ಇದ್ದಾರೆ. ತಮ್ಮ ಸರ್ಕಾರ ಎಲ್ಲಿ ಬಿದ್ದು ಹೋಗುತ್ತದೆಯೋ ಎಂಬ ಭಯದಲ್ಲಿ ಪೊಲೀಸ್ ಅಧಿಕಾರಿಗಳ ಮೂಲಕ ಶಾಸಕರು ಹಾಗೂ ಮುಖಂಡರ ಫೋನ್ ಕದ್ದಾಲಿಕೆ ನಡೆಯುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv