ಮಂಡ್ಯ: ಕೂಲಿಯ ಬಾಕಿ ಹಣ ನೂರು ರೂಪಾಯಿ ನೀಡದ್ದಕ್ಕೆ ಕಾರ್ಮಿಕ ಮಾಲೀಕನನ್ನು ಕೊಲೆಗೈದಿದ್ದಾನೆ. ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕೋಟಹಳ್ಳಿ ಗ್ರಾಮದಲ್ಲಿ ಕೊಲೆ ನಡೆದಿದೆ.
40 ವರ್ಷದ ಬಸವರಾಜು ಕೊಲೆಯಾದ ಮಾಲೀಕ. ತನ್ನ ಗದ್ದೆಯಲ್ಲಿ ಕೆಲಸ ಮಾಡಿಸಿಕೊಂಡಿದ್ದ ಬಸವರಾಜು ಕಾರ್ಮಿಕರಿಗೆ 400 ರೂ. ಹಣ ನೀಡಿ 100 ರೂ. ಬಾಕಿ ಉಳಿಸಿಕೊಂಡಿದ್ದರು. ಅಂಗಡಿಯ ಬಳಿ ಭೇಟಿಯಾದ ಬಸವವರಾಜುನನ್ನು ಕಾರ್ಮಿಕ ಬಸವರಾಜ್ ಬಾಕಿ ಕೂಲಿ ಹಣ ಕೇಳಿದ್ದಾನೆ.
ಈ ವೇಳೆ ಇಬ್ಬರ ಮಾತು ಜಗಳಕ್ಕೆ ತಿರುಗಿದೆ. ಈ ವೇಳೆ ಕಾರ್ಮಿಕನ ಮಾತಿಗೆ ಅಂಗಡಿ ಮಾಲೀಕನು ಸಹ ಧ್ವನಿಗೂಡಿಸಿ ಹೊಲದ ಮಾಲೀಕ ಬಸವರಾಜುನನ್ನು ಹಂಗಿಸಿದ್ದಾರೆ. ಈ ಸಂದರ್ಭದಲ್ಲಿ ಮೂವರ ಮಧ್ಯೆ ಮಾತಿಗೆ ಮಾತು ಬೆಳೆದು ಕೈ-ಕೈ ಮಿಲಾಯಿಸುವ ಹಂತ ತಲುಪಿದೆ.
ಕೋಪದಲ್ಲಿದ್ದ ಕಾರ್ಮಿಕ ಪಕ್ಕದಲ್ಲಿ ನಿಲ್ಲಿಸಿದ್ದ ಲಾರಿಯಲ್ಲಿನ ಕಬ್ಬಿನ ಜಲ್ಲೆಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಬಸವರಾಜನನ್ನು ಸ್ಥಳೀಯರು ಕೂಡಲೇ ಕಿಕ್ಕೇರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಸವರಾಜು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಆರೋಪಿ ಬಸವರಾಜ್ ಪರಾರಿಯಾಗಿದ್ದು, ಈ ಸಂಬಂಧ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.