ಬಿಜೆಪಿಯಿಂದ ನಿತ್ಯ ಪಿಕ್ ಪಾಕೆಟ್ ನಡೀತಿದೆ: ಡಿಕೆಶಿ

-ಇನ್ನೊಬ್ಬರನ್ನ ಟೀಕೆ ಮಾಡುವ ಬದಲು ನಮ್ಮನೆ ಸುಭದ್ರವಾಗಿ ಕಟ್ಟೋಣ

Advertisements

ಕೊಪ್ಪಳ: ರಾಜ್ಯ, ದೇಶದಲ್ಲಿ ನಿತ್ಯ ಪಿಕ್ ಪಾಕೆಟ್ ನಡೀತಾ ಇದೆ. ಪೆಟ್ರೋಲ್, ಗ್ಯಾಸ್ ಬೆಲೆ ಹೆಚ್ಚಳ ಮಾಡುವ ಮೂಲಕ ಆಡಳಿತದಲ್ಲಿರುವ ಸರ್ಕಾರ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

Advertisements

ಕೊಪ್ಪಳದ ಶ್ರೀ ಶಿವಶಾಂತ ಮಂಗಲ ಭವನದಲ್ಲಿ ನಡೆದ ಕಾಂಗ್ರೆಸ್‍ನ ಡಿಜಿಟಲ್ ಸದಸ್ಯತ್ವ ನೋಂದಣಿಯ ಪ್ರಗತಿ ಪರಿಶೀಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊಪ್ಪಳ ಜಿಲ್ಲೆಯಲ್ಲಿ ಕಾಂಗ್ರೆಸ್ ಸದಸ್ಯತ್ವ ರಾಜ್ಯದಲ್ಲೇ ಹೆಚ್ಚಾಗಿರುವುದು ಸಂತೋಷದ ಸಂಗತಿ. ಅದರಲ್ಲೂ ಗಂಗಾವತಿ ವಿಧಸನಸಭಾ ಕ್ಷೇತ್ರ, ರಾಮನಗರವನ್ನೆ ಮೀರಿಸಿದೆ ಎಂದರೆ ಜನ ಬಿಜೆಪಿ ಆಡಳಿತದಿಂದ ಎಷ್ಟು ರೋಸಿ ಹೋಗಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು ಎಂದರು.

Advertisements

ಬಿಜೆಪಿಯದ್ದು ಭ್ರಷ್ಟ ಸರ್ಕಾರ. ಎಲ್ಲದರಲ್ಲೂ ಪರ್ಸೆಂಟೇಜ್. ಜನರಿಗೆ ಕರೆಂಟ್ ಕಟ್. ಜನರ ಜೇಬೂ ಕಟ್. ಈಗ ಪುನೀತ್ ಸಿನಿಮಾ ಜೇಮ್ಸ್ ಕಿತ್ತು ಹಾಕಲು ಹೊರಟಿದ್ದಾರೆ. ಇದು ಕನ್ನಡದ ಸ್ವಾಭಿಮಾನದ ಪ್ರಶ್ನೆ. ಬಿಜೆಪಿ ಬೆಲೆ ತೆರಬೇಕಾಗುತ್ತದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆಗೆ ಸ್ವಾಗತ: ಡಿಕೆಶಿ

Advertisements

ಇವತ್ತಿನವರೆಗೆ ಕೊಪ್ಪಳ ಜಿಲ್ಲೆಯಲ್ಲಿ 1,84,302 ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ನೋಂದಣಿಯಾಗಿದೆ. ಅತಿ ಹೆಚ್ಚು ಜನರನ್ನು ನೋಂದಣಿ ಮಾಡಿದವರನ್ನು ಇಲ್ಲಿಯೇ ಸನ್ಮಾನ ಮಾಡುವುದು ದೊಡ್ಡ ವಿಷಯವಲ್ಲ, ಇನ್ನೂ 7 ದಿನ ಸಮಯಾವಕಾಶ ಇದೆ. ಈ ಸಮಯವನ್ನು ಕಾಂಗ್ರೆಸ್ ಬಂಧುಗಳು ಸದುಪಯೋಗ ಪಡೆದುಕೊಳ್ಳಬೇಕು. ಅತಿ ಹೆಚ್ಚು ಸದಸ್ಯತ್ವ ನೋಂದಣಿ ಮಾಡಿಸಿದವರನ್ನು ರಾಜಧಾನಿ ಬೆಂಗಳೂರಿಗೆ ಆಹ್ವಾನಿಸಿ ಗೌರವಿಸುವುದಾಗಿ ಭರವಸೆ ನೀಡಿದರು. ಇದನ್ನೂ ಓದಿ: ಗ್ರಾಮದ ಜಾತ್ರೆಯಲ್ಲಿ ನೃತ್ಯ ಮಾಡಿ ರಂಜಿಸಿದ ಸಿದ್ದರಾಮಯ್ಯ

ಅವರಿವರನ್ನು ಟೀಕೆ ಮಾಡುವ ಬದಲು ಮೊದಲಿಗೆ ನಮ್ಮ ಮನೆಯನ್ನು ಸುಭದ್ರವಾಗಿ ಕಟ್ಟೋಣ. ಆನಂತರ ಇನ್ನೊಬ್ಬರ ಮನೆ ವಿಚಾರದ ಬಗ್ಗೆ ಮಾತಾಡೋಣ. ಮುಂಬರುವ 7 ದಿನಗಳಲ್ಲಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ 1 ಲಕ್ಷ ಸದಸ್ಯತ್ವ ನೋಂದಣಿಯಾಗಲಿ. ಬಿಜೆಪಿ, ದಳ ಸೇರಿದಂತೆ ಎಲ್ಲ ಕಾರ್ಯಕರ್ತರನ್ನು ಕಾಂಗ್ರೆಸ್‍ಗೆ ಕರೆ ತನ್ನಿ. ನಮ್ಮಷ್ಟಕ್ಕೆ ನಾವೇ ಕಾಲು ಎಳೆಯದಿದ್ದರೆ ಜಿಲ್ಲೆಯ 5ಕ್ಕೆ 5 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದರು.

ಇದೇ ವೇಳೆ ಜಿಲ್ಲೆಯಲ್ಲಿ ಅತಿ ಹೆಚ್ಚು ಕಾಂಗ್ರೆಸ್ ಸದಸ್ಯತ್ವ ನೋಂದಣಿ ಮಾಡಿಸಿದ ಗಂಗಾವತಿ ವಿಧಾನಸಭಾ ಕ್ಷೇತ್ರದ ಮುಖಂಡರು, ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿ ಮಾತನಾಡಿ, ಸದಸ್ಯತ್ವ ನೋಂದಣಿಗೆಂದು ಮನೆ ಮನೆಗೆ ತೆರಳುವ ನಮ್ಮ ಕಾಂಗ್ರೆಸ್ ಮುಖಂಡರಿಗೆ ಜನರಿಂದ ಅದ್ದೂರಿ ಸ್ವಾಗತ ಸಿಗುತ್ತಿದೆ. ಬಿಜೆಪಿಯವರು ಜಾತಿ ಹೆಸರಿನಲ್ಲಿ ಮೋಸ ಮಾಡಿದ್ದಾರೆ ಎಂದು ಹೇಳಿ ಸಂತೋಷದಿಂದ ಕಾಂಗ್ರೆಸ್ ಸದಸ್ಯತ್ವ ಪಡೆಯುತ್ತಿದ್ದಾರೆ. ಸದಸ್ಯತ್ವ ನೋಂದಣಿಯ ಸಾಧನೆಯಲ್ಲಿ ಪಾಲ್ಗೊಂಡ ಎಲ್ಲರನ್ನೂ ಅಭಿನಂದಿಸುವುದಾಗಿ ತಿಳಿಸಿದರು.

Advertisements
Exit mobile version