ನವದೆಹಲಿ: ನಾಯಿ ನಿಯತ್ತಿಗೆ ಸದಾ ಹೆಸರವಾಸಿಯಾಗಿರುತ್ತದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಮಾಲೀಕ ವಹಿಸಿದ್ದ ಕೆಲಸವನ್ನು ನಾಯಿಯೊಂದು ನಿಯತ್ತಿನಿಂದ ಮಾಡಿದೆ. ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಚೈನೀಸ್ ವ್ಯಕ್ತಿಯೊಬ್ಬರು ಫಾಂಟೌನ್ ಎಂಬ ಹೆಸರಿನ ನಾಯಿಯನ್ನು ಸಾಕಿದ್ದರು. ತಮ್ಮ ಮನೆಯಲ್ಲಿ ಒಬ್ಬ ಸದಸ್ಯನಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಆ ನಾಯಿಗೆ ತಾವೂ ಮನೆಯಲ್ಲಿ ಇಲ್ಲದ ವೇಳೆ ತಮ್ಮ ಮಗಳಿಗೆ ಹೋಮ್ ವರ್ಕ್ ಮಾಡಿಸುವ ಜವಬ್ದಾರಿಯನ್ನು ವಹಿಸಿದ್ದರು. ಅದರಂತೆಯೇ ನಾಯಿ ಕೂಡ ಮಾಲೀಕ ವಹಿಸಿದ್ದ ಕೆಲಸವನ್ನು ನಿಯತ್ತಿನಿಂದ ಮಾಡಿದೆ. ಬಾಲಕಿಗೆ ಮುಂದೆ ನಿಂತು ಹೋಮ್ ವರ್ಕ್ ಮಾಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಫಾಂಟೌನ್ ನಾಯಿ ತನ್ನೆರಡು ಕಾಲುಗಳನ್ನು ನೆಲದ ಮೇಲೆ, ಮತ್ತೆರಡು ಕಾಲುಗಳನ್ನು ಮೇಜಿನ ಮೇಲಿಟ್ಟು ಗಮನವಿಟ್ಟು ಬಾಲಕಿ ಹೋಮ್ ವರ್ಕ್ ಮಾಡುತ್ತಿರುವುದನ್ನು ಗಮನಿಸುತ್ತಿದೆ. ಕೆಲವೊಮ್ಮೆ ದೂರದಿಂದ ನೋಡುತ್ತದೆ. ಒಮ್ಮೆ ಹತ್ತಿರಕ್ಕೆ ಹೋಗಿ ನೋಡುತ್ತದೆ. ಒಟ್ಟಿನಲ್ಲಿ ನಾಯಿ ಬಾಲಕಿ ಹೋಮ್ ವರ್ಕ್ ಮುಗಿಸುವರೆಗೂ ಮೇಜು ಬಿಟ್ಟು ಬೇರೆಡೆ ಹೋಗುವುದೇ ಇಲ್ಲ. ನಂತರ ಬಾಲಕಿ ಹೋಮ್ ವರ್ಕ್ ಮುಗಿಸಿದ ಬಳಿಕ ಆಕೆಯ ಜೊತೆ ಸೇರಿಕೊಂಡು ಆಟವಾಡಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ನಾನು ಹೋಮ್ ವರ್ಕ್ ಮುಗಿಸುವರೆಗೂ ನನ್ನ ಜೊತೆಯೇ ಫಾಂಟೌನ್ ಇರುತ್ತದೆ. ಹೀಗಾಗಿ ನಾನು ಬೇರೆಡೆ ಗಮನ ಹರಿಸುವುದಿಲ್ಲ. ನಾಯಿ ನನ್ನ ಜೊತೆ ಇರುವುದರಿಂದ ನನಗೆ ಬೇಸರವೂ ಆಗುವುದಿಲ್ಲ. ಇದರಿಂದ ನನ್ನ ಜೊತೆ ಸಹಪಾಠಿಯಿದ್ದಂತೆ ಭಾಸವಾಗುತ್ತದೆ ಎಂದು ಬಾಲಕಿ ಹೇಳಿದ್ದಾಳೆ. ಇತ್ತ ತಂದೆ ಕೂಡ ತಾವೂ ಸಾಕಿದ್ದ ನಾಯಿಯ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ.