ಡಾಲಿ ಧನಂಜಯ (Daali Dhananjay) ಅಭಿನಯದ ‘ಕೋಟಿ’ (Kotee Film) ಸಿನಿಮಾ ಜೂನ್ 14ಕ್ಕೆ ಅದ್ಧೂರಿಯಾಗಿ ರಿಲೀಸ್ ಆಗುತ್ತಿದೆ. ಈಗಾಗಲೇ ಟ್ರೈಲರ್ ಮತ್ತು ಹಾಡುಗಳು ಟ್ರೆಂಡ್ ಆಗಿದ್ದು, ಜೂನ್ 11ರಿಂದ ಟಿಕೆಟ್ ಬುಕ್ಕಿಂಗ್ ಕೂಡ ಓಪನ್ ಆಗಿದೆ.
ಈ ಚಿತ್ರದ ಬರಹಗಾರ, ನಿರ್ದೇಶಕ ಪರಮ್ ಕಿರುತೆರೆಯಲ್ಲಿ ಬಹುದೊಡ್ಡ ಹೆಸರು. ದಶಕಗಳ ಕಾಲ ಕಲರ್ಸ್ ಕನ್ನಡವನ್ನು ಮುನ್ನಡೆಸಿದ್ದ ಇವರು ಈಗ ನಿರ್ದೇಶನದ ಟೋಪಿ ತೊಟ್ಟಿದ್ದಾರೆ. ‘ಕೋಟಿ’ ತಂಡ ನಿರಂತರವಾಗಿ ಸಿನಿಮಾ ಪ್ರಚಾರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಮೆಟ್ರೋ, ಬಸ್, ಟಿವಿ, ಯೂಟ್ಯೂಬ್, ಇನ್ಸ್ಟಾಗ್ರಾಂ ಎಲ್ಲಾ ಕಡೆ ಕೋಟಿ ಸಿನಿಮಾ ಸದ್ದು ಮಾಡ್ತಾ ಇದೆ. ಇದನ್ನೂ ಓದಿ:ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ನಟಿ ಮಯೂರಿ
ಇತ್ತೀಚೆಗೆ ಅದ್ದೂರಿಯಾಗಿ ನಡೆದ ‘ಕೋಟಿ’ ಸಿನಿಮಾದ ಪ್ರಿ-ರಿಲೀಸ್ ವಿಶೇಷ ಟಿವಿ ಕಾರ್ಯಕ್ರಮಕ್ಕೆ ಸುದೀಪ್ ಆಗಮಿಸಿದ್ದರು. ಸುಮಾರು ಒಂದು ಗಂಟೆಗಳಿಗೂ ಅಧಿಕ ಸಮಯ ವೇದಿಕೆಯ ಮೇಲಿದ್ದು, ತಂಡಕ್ಕೆ ಶುಭ ಹಾರೈಸಿದರು. ಬಳಿಕ ಸುದೀಪ್‌ಗೆ ‘ಕೋಟಿ’ ಸಿನಿಮಾದ ಮೊದಲ ಟಿಕೆಟ್ ನೀಡಿತ್ತು. ಹತ್ತಾರು ವರ್ಷ ಟಿವಿ, ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿರುವ ಪರಮ್ ಅವರಿಗೆ ಎಲ್ಲೆಡೆ ಸ್ನೇಹಿತರಿದ್ದಾರೆ. ಇದೇ ಜೂನ್ 12ರಂದು ‘ಕೋಟಿ’ ತಂಡ ಸಿನಿಮಾತಾರೆಗಳಿಗೆ ಚಿತ್ರದ ಪ್ರೀಮಿಯರ್ ಶೋ ಆಯೋಜಿಸಿದೆ. ದೊಡ್ಡ ಸಂಖ್ಯೆಯಲ್ಲಿ ತಾರೆಗಳು ಸೇರುವ ನಿರೀಕ್ಷೆ ಇದೆ. ಇದರ ಜೊತೆಗೆ ಸಿನಿರಸಿಕರಿಗಾಗಿ ಎರಡು ಪೇಯ್ಡ್ ಪ್ರೀಮಿಯರ್ ಶೋ ಕೂಡ ಇದೆ.
ಜೂನ್ 13ರಂದು ಮೈಸೂರಿನಲ್ಲಿ ಪೇಯ್ಡ್ ಪ್ರೀಮಿಯರ್ ಶೋಗಳಿದ್ದು, ಧನಂಜಯ ಮತ್ತು ಚಿತ್ರತಂಡ ಮೈಸೂರಿನ ಸಿನಿರಸಿಕರ ಜೊತೆ ಸಿನಿಮಾ ನೋಡಲಿದ್ದಾರೆ. ‘ಕೋಟಿ’ ಸಿನಿಮಾ ಜೂನ್ 14ರಂದು ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ನಂತರದ ದಿನಗಳಲ್ಲಿ ಅಮೇರಿಕಾ, ಇಂಗ್ಲೆಂಡ್, ಯುರೋಪ್ ಮತ್ತು ಗಲ್ಫ್ ದೇಶಗಳಲ್ಲೂ ಬಿಡುಗಡೆಯಾಗಲಿದೆ.
ವರ್ಷದ ಮೊದಲಾರ್ಧದಲ್ಲಿ ಯಾವುದೇ ದೊಡ್ಡ ಗೆಲುವು ಕಾಣದೆ ಸೋತಿರುವ ಕನ್ನಡ ಇಂಡಸ್ಟ್ರಿಗೆ ಅಪ್ಪಟ ಕನ್ನಡ ಮಣ್ಣಿನ ಕತೆಯಾದ ‘ಕೋಟಿ’ ಗೆಲ್ಲುವ ಭರವಸೆಯಾಗಿ ಕಂಡಿದೆ. ‘ಕೋಟಿ’ ಚಿತ್ರದ ತಾರಾಗಣದಲ್ಲಿ ಡಾಲಿ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್ ಮತ್ತು ಖಳನಾಯಕನಾಗಿ ರಮೇಶ್ ಇಂದಿರಾ ನಟಿಸಿದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್ ಸತ್ಯ ಜೊತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ.
‘ಕೋಟಿ’ ಚಿತ್ರದಲ್ಲಿ ಐದು ಹಾಡುಗಳಿವೆ. ಈ ಹಾಡುಗಳಿಗೆ ಯೋಗರಾಜ್ ಭಟ್ ಮತ್ತು ವಾಸುಕಿ ವೈಭವ್ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು ‘777 ಚಾರ್ಲಿ’ ಖ್ಯಾತಿಯ ನೊಬಿನ್ ಪೌಲ್ ಹೊತ್ತಿದ್ದಾರೆ. ‘ಕಾಂತಾರ’ ಸಿನಿಮಾದ ಕೆಲಸಕ್ಕೆ ಪ್ರಶಂಸೆಗಳಿಸಿದ್ದ ಪ್ರತೀಕ್ ಶೆಟ್ಟಿಯವರು ‘ಕೋಟಿ’ಯ ಸಂಕಲನಕಾರರಾದರೆ, ಟೆಲಿವಿಷನ್‌ನ ಖ್ಯಾತ ಛಾಯಾಗ್ರಾಹಕ ಅರುಣ್ ಅವರು ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಪರಮ್ ನಿರ್ದೇಶನದ ‘ಕೋಟಿ’ ಜೂನ್ 14ರಂದು 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.