– ಗೂಬೆ ಕೂರಿಸುವುದರಲ್ಲೂ ಸಿದ್ದರಾಮಯ್ಯ ನಿಸ್ಸೀಮರು
ಬೆಂಗಳೂರು: ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಹಡಗಿನಲ್ಲಿ ಅಂಡಮಾನ್, ನಿಕೋಬಾರ್ಗೆ ಕಳುಹಿಸಬೇಕು. ಅಲ್ಲಿ ವೀರ್ ಸಾವರ್ಕರ್ ಹೇಗಿದ್ದರು ಎನ್ನುವುದು ಅವರಿಗೆ ಅರ್ಥವಾಗುತ್ತದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾತನಾಡಿದ ಕೇಂದ್ರ ಸಚಿವರು, ಸಿದ್ದರಾಮಯ್ಯ ಅವರಿಗೆ ಬೇರೆ ಕೆಲಸ ಇಲ್ಲ. ರಾತ್ರಿಯಲ್ಲ ನಿದ್ದೆಗೆಟ್ಟು ಏನ್ಮಾಡಬೇಕು ಅಂತ ಯೋಚನೆ ಮಾಡುತ್ತಿರುತ್ತಾರೆ. ಇಂತಹ ಸಮಯದಲ್ಲಿ ಈ ರೀತಿಯ ಇತಿಹಾಸ ತಿರುಚುವ ಹೇಳಿಕೆ ನೀಡಿ ಅಪಹಾಸ್ಯಕ್ಕೆ ಈಡಾಗುತ್ತಿದ್ದಾರೆ. ಹಾಗಾಗಿ ಅವರು ಅಂಡಮಾನ್‍ಗೆ ಹೋಗಿ ವೀರ್ ಸಾವರ್ಕರ್ ವಾಸವಿದ್ದ ಜೈಲಿನ ಸ್ಥಿತಿಗತಿ ನೋಡಿಕೊಂಡು ಬರಬೇಕು. ಆಗ ಅವರಲ್ಲಿರುವ ಕೆಟ್ಟ ಬುದ್ಧಿ ಸರಿ ಹೋಗುತ್ತದೆ ಎಂದು ಕುಟುಕಿದರು.
Advertisement
Advertisement
ಚರಿತ್ರೆಯನ್ನು ಮತ್ತೆ ತಾನೇ ಬರೆಯುತ್ತೇನೆ ಎಂಬ ಹುಂಬುತನದ ಕೆಲಸ ಸರಿಯಲ್ಲ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕಾಲದಲ್ಲಿ ವೀರ್ ಸಾವರ್ಕರ್ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದಾರೆ. ಹಾಗಾದರೆ ಇಂದಿರಾ ಗಾಂಧಿ ಸಿದ್ದರಾಮಯ್ಯನವರ ನಾಯಕರಲ್ಲವೇ? ಸುಮ್ಮನೆ ಅವರ ಅಂಚೆ ಚೀಟಿ ಜಾರಿಗೆ ತರುತ್ತಿದ್ರಾ? ಸಿದ್ದರಾಮಯ್ಯ ಅವರನ್ನು 5 ವರ್ಷ ಮುಖ್ಯಮಂತ್ರಿಯಾಗಿ ಸಹಿಸಿಕೊಂಡಿರುವುದೇ ದೊಡ್ಡ ವಿಚಾರ ಎಂದು ವಾಗ್ದಾಳಿ ನಡೆಸಿದರು.
Advertisement
ಗೂಬೆ ಕೂರಿಸುವದರಲ್ಲು ಸಿದ್ದರಾಮಯ್ಯನವರು ನಿಸ್ಸೀಮರು. ಕುಹಕದ ಮಾತು ಮತ್ತು ವಕ್ರ ಮಾತುಗಳನ್ನಾಡುವುದು ಅವರ ಕೆಲಸ. ಸಿದ್ದರಾಮಯ್ಯನವರು ಏನು ಅನ್ನೋದು ಕಾಂಗ್ರೆಸ್ಸಿವರಿಗೆ ಗೊತ್ತು. ಒಮ್ಮೆ ಅಂಡಮಾನ್, ನಿಕೋಬಾರ್ ಗೆ ಹೋಗಿ ಸಾವರ್ಕರ ಬಗ್ಗೆ ತಿಳಿಯಲಿ. ಸಾರ್ವಜಿಕರಿಂದ ಹಣ ಪಡೆದು ಅವರನ್ನು ಕಳುಹಿಸಿಕೊಡುವ ವ್ಯವಸ್ಥೆ ಮಾಡೋಣ ಎಂದರು.
Advertisement
ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ಕೊಡಬೇಕು ಎನ್ನುವುದು ನಮ್ಮದು ಆದ್ಯತೆ. ಆದರೆ ವೀರ್ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವ ವಿಚಾರವನ್ನು ಅದಕ್ಕೆ ತಳಕು ಹಾಕುವುದು ಸರಿಯಲ್ಲ. ಇಂತಹ ಮಾತುಗಳಿಂದ ಜನರ ತಲೆ ಹಾಳು ಮಾಡುವ ಪ್ರವೃತ್ತಿ ಯಾರಿಗೂ ಶೋಭೆ ತರುವಂತದ್ದಲ್ಲ ಎಂದು ಗುಡುಗಿದರು.
ಕೇಂದ್ರ ಸರ್ಕಾರದಿಂದ ನೆರೆ ಪರಿಹಾರ ವಿಳಂಭ ವಿಚಾರವಾಗಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, ಈಗಾಗಲೆ ಒಂದು ಹಂತದ ಹಣ ಬಿಡುಗಡೆಯಾಗಿದೆ. ಬಾಕಿ ಹಣ ಬಿಡುಗಡೆಗು ಸಿದ್ಧತೆ ನಡೆದಿದೆ. ರಾಜ್ಯ ಸರ್ಕಾರವು ಕೇಂದ್ರಕ್ಕೆ ಎಲ್ಲಾ ದಾಖಲೆಗಳನ್ನು ಸಲ್ಲಿಸಿದೆ. ಮುಂದಿನ ಹಂತದಲ್ಲಿ ಹಣ ಬಿಡುಗಡೆಯಾಗಲಿದೆ. ಮೊದಲ ಹಂತದಲ್ಲಿ ಕರ್ನಾಟಕ 1,200 ಕೋಟಿ ರೂ. ಹಾಗೂ ಬಿಹಾರ ರಾಜ್ಯಕ್ಕೆ 400 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.
ಎಸ್.ಟಿ.ಸೋಮಶೇಖರ್ ಬಿಜೆಪಿ ಸೇರ್ಪಡೆಗೆ ಯಶವಂತಪುರ ಬಿಜೆಪಿ ಘಟಕ ಪರ ವಿರೋಧ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ. ವರಿಷ್ಠರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ಅವರಿಗೆ ಟಿಕೆಟ್ ನೀಡಬೇಕಾ ಅಥವಾ ಬೇಡ್ವಾ ಎನ್ನುವ ತೀರ್ಮಾನ ಹೈಕಮಾಂಡ್‍ಗೆ ಬಿಟ್ಟಿದ್ದು ಎಂದು ತಿಳಿಸಿದರು.