ಬೆಂಗಳೂರು: ಇಂದು ಕಾಂಗ್ರೆಸ್ ಜೆಡಿಎಸ್ ಜಂಟಿ ಪರಿವರ್ತನಾ ಸಮಾವೇಶ ನಡೆಯುತ್ತಿದ್ದು, ಇದಕ್ಕೂ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಅವರು ಜ್ಯೋತಿಷ್ಯರ ಸಲಹೆಯನ್ನು ಕೇಳಿದ್ದಾರೆ.
ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದಲ್ಲಿ ಸಮಾವೇಶ ನಡೆಯುತ್ತಿದೆ. ಈ ಸಮಾವೇಶಕ್ಕೂ ರೇವಣ್ಣ ಅವರು ಜ್ಯೋತಿಷಿಗಳ ಸಲಹೆಯಂತೆ ಸಮಾವೇಶದ ಮುಖ್ಯ ವೇದಿಕೆಯನ್ನು ಪೂರ್ವ ದಿಕ್ಕಿಗೆ ಮುಖ ಮಾಡುವಂತೆ ನಿರ್ಮಾಣ ಮಾಡಿಸಿದ್ದಾರೆ. ಅಷ್ಟೇ ಅಲ್ಲದೇ ಸಮಾವೇಶದ ಆರಂಭಕ್ಕೂ ರೇವಣ್ಣರಿಂದಲೇ ಮುಹೂರ್ತ ಕೇಳಿದ್ದು, ರಾಹುಕಾಲ ಆರಂಭಕ್ಕೂ ಮುನ್ನ ಸಮಾವೇಶ ಆರಂಭಿಸುವಂತೆ ರೇವಣ್ಣ ಅವರು ಸಲಹೆ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.
Advertisement
Advertisement
ಇಂದು ಸಂಜೆ 4.56 ರಿಂದ ಸಂಜೆ 6 ರವರೆಗೂ ರಾಹುಕಾಲ ಇದೆ. ಈ ಹಿನ್ನೆಲೆಯಲ್ಲಿ ರೇವಣ್ಣರ ಸಲಹೆಯಂತೆ ಸಂಜೆ 4.30 ರಿಂದ 4.55 ರ ಒಳಗೆ ಸಮಾವೇಶ ಶುರುವಾಗಲಿದೆ. ರಾಹುಲ್ ಗಾಂಧಿ ಆಗಮಿಸುವ ಮುನ್ನವೇ ಜಂಟಿ ಪರಿವರ್ತನಾ ಸಮಾವೇಶ ಆರಂಭವಾಗಲಿದೆ.
Advertisement
ರಾಹುಲ್ ಗಾಂಧಿ ಬರುವವರೆಗೂ ಸಮಾವೇಶದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಭಾಷಣ ಮಾಡಲಿದ್ದಾರೆ. ಸಂಜೆ 5.15 ರ ಸುಮಾರಿಗೆ ರಾಹುಲ್ ಗಾಂಧಿ ಸಮಾವೇಶಕ್ಕೆ ಆಗಮಿಸಲಿದ್ದಾರೆ. ಜೊತೆಗೆ ರಾಹುಕಾಲದ ಅವಧಿಯಲ್ಲೇ ರಾಹುಲ್ ಗಾಂಧಿ ಚುನಾವಣಾ ಭಾಷಣ ಮಾಡಲಿದ್ದಾರೆ.
Advertisement
ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ಇದೇ ಮೈದಾನದಲ್ಲಿ ಬಿಜೆಪಿ ಪರಿವರ್ತನಾ ಸಮಾವೇಶದ ಉದ್ಘಾಟನೆ ನಡೆದಿತ್ತು. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕೆ ನಿರೀಕ್ಷಿತ ಮಟ್ಟದಲ್ಲಿ ಜನ ಬಾರದ ಕಾರಣ ಫ್ಲಾಪ್ ಆಗಿತ್ತು. ಬಿಜೆಪಿ ಸಮಾವೇಶದಲ್ಲಿ ಉತ್ತರ ದಿಕ್ಕಿಗೆ ಮುಖ ಮಾಡಿದಂತೆ ಮುಖ್ಯ ವೇದಿಕೆಯನ್ನು ನಿರ್ಮಿಸಲಾಗಿತ್ತು. ಅಂದು ಬಿಜೆಪಿ ಸಮಾವೇಶ ಫ್ಲಾಪ್ ಆಗಿದ್ದು ವಾಸ್ತು ದೋಷದಿಂದಲೇ ಎಂದು ರೇವಣ್ಣ ಹೇಳಿದ್ದರು. ಹೀಗಾಗಿ ವಾಸ್ತು ಪ್ರಕಾರವಾಗಿ ಇವತ್ತಿನ ಸಮಾವೇಶವನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ನಡೆಸುತ್ತಿದ್ದಾರೆ.